ತಿರುವನಂತಪುರ : ಚಿನ್ನದ ಕಳ್ಳಸಾಗಣೆ ಪ್ರಕರಣದ ಮಾಸ್ಟರ್ ಮೈಂಡ್ ಸ್ವಪ್ನಾ ಸುರೇಶ್ ನಡೆಸಿರುವ ಒಂದೊಂದೆ ಅಕ್ರಮ ಬಯಲಾಗು ತ್ತಿದೆ. ಇದೀಗ ಖಾಸಗಿ ಬ್ಯಾಂಕ್ ವೊಂದರಲ್ಲಿ ಇರುವ ಲಾಕರ್ ನಲ್ಲಿ ಬರೋಬ್ಬರಿ 38 ಕೋಟಿ ರೂಪಾಯಿ ಜಮೆಯಾಗಿರುವುದನ್ನು ಇಡಿ ( ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಬ್ಯಾಂಕಿನಿಂದ ಲಾಕರ್ ಸೌಲಭ್ಯವನ್ನು ಪಡೆದು ಅದರಲ್ಲಿ ಈ ದೊಡ್ಡ ಮೊತ್ತದ ಹಣ ಇಡಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿಯಾದ ಸಂದೀಪ್ ಕೂಡ ಇದೇ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ವಿಚಾರವೂ ಇದೇ ವೇಳೆ ಬೆಳಕಿಗೆ ಬಂದಿದೆ. ಸ್ವಪ್ನಾಸುರೇಶ್ ಬ್ಯಾಂಕ್ ಲಾಕರ್ ನ್ನು ಅಧಿಕಾರಿಗಳು ಇನ್ನೂ ಜಪ್ತಿ ಮಾಡಲಾಗಿಲ್ಲ. ಆದರೆ ಬ್ಯಾಂಕ್‌ನ ಮ್ಯಾನೇಜರ್ ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ,ಕುಡುವಲ್ಲಿ ನಗರಸಭಾ ಸದಸ್ಯ ಕಾರಟ್ ಫೈಸಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ಬೆಳಗಿನ ಜಾವ ಅವರ ಮನೆ ಹಾಗೂ ಅದರ ಪಕ್ಕದಲ್ಲಿರುವ ಅವರಿಗೆ ಸಂಬಂಧಿಸಿದ ಕಟ್ಟಡದ ಮೇಲೆ ದಾಳಿ ನಡೆಸಿದ ಕಸ್ಟಮ್ಸ್ ಇಲಾಖೆ ಅಧಿಕಾರಿ ಗಳು, ಕೆಲವು ಸಾಕ್ಷ್ಯಾಧಾರ ವಶಪಡಿಸಿಕೊಂಡಿದ್ದಾರೆ.