ಸೋಮವಾರ, ಏಪ್ರಿಲ್ 28, 2025
HomeBreakingಗುರುರಾಘವೇಂದ್ರ ಬ್ಯಾಂಕ್ ಮಾಜಿ ಸಿಇಓ ಆತ್ಮಹತ್ಯೆ ಪ್ರಕರಣ : ವಾಸುದೇವ ಮಯ್ಯ ಡೆತ್ ನೋಟ್ ನಲ್ಲಿದೆ...

ಗುರುರಾಘವೇಂದ್ರ ಬ್ಯಾಂಕ್ ಮಾಜಿ ಸಿಇಓ ಆತ್ಮಹತ್ಯೆ ಪ್ರಕರಣ : ವಾಸುದೇವ ಮಯ್ಯ ಡೆತ್ ನೋಟ್ ನಲ್ಲಿದೆ ಹಲವರ ಹೆಸರು !

- Advertisement -

ಬೆಂಗಳೂರು : ಗುರುರಾಘವೇಂದ್ರ ಬ್ಯಾಂಕ್ ನಲ್ಲಿ ನಡೆದಿರುವ ಬಹುಕೋಟಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕಿನ ಮಾಜಿ ಸಿಇಓ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮಣೂರು ವಾಸುದೇವ ಮಯ್ಯ ಅವರು ಬರೆದಿಟ್ಟಿರುವ ಡೆತ್ ನೋಟ್ ಹಲವು ಸ್ಪೋಟಕ ಸತ್ಯಗಳನ್ನು ಬಯಲು ಮಾಡಿದೆ. ತನಗೆ ಯಾರೆಲ್ಲಾ ಮೋಸ ಮಾಡಿದ್ರು, ಪ್ರಕರಣದಲ್ಲಿ ತನ್ನ ಪಾತ್ರವೇನು ಅನ್ನುವ ಕುರಿತು ಎಳೆ ಎಳೆಯಾಗಿ ಬರೆದಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಉಡುಪಿ ಜಿಲ್ಲೆಯ ಮಣೂರು ಮೂಲದ ವಾಸುದೇವ ಮಯ್ಯ 2018ರ ವರೆಗೂ ಗುರುರಾಘವೇಂದ್ರ ಬ್ಯಾಂಕ್ ನಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಬ್ಯಾಂಕಿನಲ್ಲಿ ಸುಮಾರು 1400 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿತ್ತು.

ಇತ್ತೀಚಿಗಷ್ಟೆ ಎಸಿಬಿ ದಾಳಿ ನಡೆದಿದ್ದು, ಸಿಐಡಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಬ್ಯಾಂಕ್ ಸುಮಾರು 27 ಮಂದಿಗೆ 921 ಕೋಟಿ ರೂಪಾಯಿಯನ್ನು ಯಾವುದೇ ದಾಖಲೆ ಪಡೆಯದೆ ನೀಡಿರುವುದು ಬಯಲಾಗಿತ್ತು. ಅಲ್ಲದೇ 700 ಕೋಟಿ ರೂಪಾಯಿ ಸಾಲವನ್ನು ಕಮಿಷನ್ ಆಧಾರದ ಮೇಲೆ ನೀಡಲಾಗಿದೆ ಎಂಬ ಆರೋಪವೂ ಇದೆ. ಇದೆಲ್ಲದರ ನಡುವಲ್ಲೇ ನಿನ್ನೆಯಷ್ಟೇ ಬ್ಯಾಂಕಿನ ಮಾಜಿ ಸಿಇಓ ಮಣೂರು ವಾಸುದೇವ ಮಯ್ಯ ಅವರು ಬೆಂಗಳೂರಿನ ಉತ್ತರಹಳ್ಳಿಯ ಪೂರ್ಣಪ್ರಜ್ಞಾ ಲೇಔಟ್ ನಲ್ಲಿರುವ ತನ್ನ ಮನೆಯ ಮುಂಭಾಗದಲ್ಲಿ ಕಾರನ್ನು ನಿಲ್ಲಿಸಿ ಮದ್ಯದ ಜೊತೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ವಾಸುದೇವ ಮಯ್ಯ ಅವರ ಆತ್ಮಹತ್ಯೆ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರಿಗೆ ಮೃತದೇಹದ ಬಳಿಯಲ್ಲಿಯೇ 12 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ತನ್ನ ಸಾವಿಗೂ ಮುನ್ನವೇ ವಾಸುದೇವ ಮಯ್ಯ ಅವರು ತನಗೆ ಯಾರು ಮೋಸ ಮಾಡಿದ್ದಾರೆ. ಅವ್ಯವಹಾರದಲ್ಲಿ ತನ್ನ ಪಾತ್ರವೇನು ಅನ್ನುವ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಗುರು ರಾಘವೇಂದ್ರ ಬ್ಯಾಂಕಿನ ಹಣದಲ್ಲಿ ತಾನು ಯಾವ ಆಸ್ತಿಯನ್ನೂ ಸಂಪಾದನೆ ಮಾಡಲಿಲ್ಲ. ಬಡ್ಡಿಗೆ ಹಣ ಕೊಟ್ಟು ತನ್ನಲ್ಲಿ ಇದ್ದುದ್ದನ್ನೂ ಕಳೆದುಕೊಂಡಿದ್ದೇನೆ. ತಾನು ಸಿಇಒ ಆಗಿದ್ದ ಅವಧಿಯಲ್ಲಿ ತನ್ನ ಸ್ಥಾನಮಾನದಿಂದ ಲಾಭ ಪಡೆದವರು, ಎಂಜಾಯ್ ಮಾಡಿದವರು ಬೇರೆಯವರು. ನಾನು ಮಾತ್ರ ಬಲಿಪಶುವಾಗಿದ್ದೇನೆ ಎಂದು ಬರೆದಿದ್ದಾರೆ.

ಇನ್ನು ಕುಮಾರೇಶ, ರಘುನಾಥ್, ಜಸ್ವಂತ್ ರೆಡ್ಡಿ, ತಲ್ಲಂ, ರಂಜಿತ್, ಶ್ರೀನಿವಾಸ್ ಮುಂತಾದವರು ನನ್ನಿಂದ ನೆರವು ಪಡೆದು ನನಗೇ ಮೋಸ ಮಾಡಿದ್ದಾರೆ. ಈ ಪೈಕಿ ಜಸ್ವಂತ್ 150 ಕೋಟಿ ರೂ., ರಘುನಾಥ್ 143 ಕೋಟಿ ರೂ. ಸಾಲ ಪಡೆದಿದ್ದಾರೆ. ಇವರೆಲ್ಲ ಈ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ, ಚಿತ್ರರಂಗದಲ್ಲಿ ತೊಡಗಿಸಿ ಲಾಭ ಮಾಡಿಕೊಂಡಿದ್ದಾರೆಂದು ಡೆತ್‌ನೋಟ್‌ನಲ್ಲಿ ಮಯ್ಯ ಆರೋಪಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಡೆತ್ ನೋಟ್ ನಲ್ಲಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಯಾರೆಲ್ಲಾ ಹೆಸರನ್ನು ಮಯ್ಯ ಬರೆದಿದ್ದಾರೋ ಅವರನ್ನೆಲ್ಲಾ ವಿಚಾರಣೆಗೆ ಒಳಪಡಿಸಲಾಗುವುದು ಎಂದಿದ್ದಾರೆ.

ಗುರು ರಾಘವೇಂದ್ರ ಬ್ಯಾಂಕ್ ಹಗರಣ ಜನವರಿ ತಿಂಗಳಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ ಆರ್ ಬಿಐ ಹಣ ಡ್ರಾ ಮಾಡುವುದಕ್ಕೆ ಆರ್‌ಬಿಐ ಮಿತಿ ನಿಗದಿಪಡಿಸಿದ್ದರಿಂದ ಗ್ರಾಹಕರಿಗೆ ತೊಂದರೆಯಾಗಿತ್ತು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಗ್ರಾಹಕರ ಪರವಾಗಿ ಸ್ವತಃ ವಾದ ಮಂಡಿಸಿದ್ದರು. ನಂತರ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು ಬ್ಯಾಂಕ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಬ್ಯಾಂಕಿನ ಅಧ್ಯಕ್ಷರು ಹಾಗೂ ಮಾಜಿ ಸಿಇಓ ಮನೆಯ ಮೇಲೆ ಎಬಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರ ಬೆನ್ನಲೇ ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular