Jain Muni murder case : ಜೈನಮುನಿ ಹತ್ಯೆ ಪ್ರಕರಣ, ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ದತೆ

ಚಿಕ್ಕೋಡಿ : ಹೀರೆಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿಮಹಾರಾಜರ ಹತ್ಯೆ ಪ್ರಕರಣಕ್ಕೆ (Jain Muni murder case) ಸಂಬಂಧಿಸಿದಂತೆ ಈಗಾಗಲೇ ಶವದ ಮರಣೋತ್ತರ ಕಾರ್ಯ ನಡೆದಿದ್ದು, ಆಶ್ರಮದಲ್ಲಿಯೇ ಅಂತ್ಯಕ್ರೀಯೆಗೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಜೈನ ಸಂಪ್ರದಾಯದಂತೆ ಅಂತ್ಯಕ್ರೀಯೆ ನಡೆಯಲಿದ್ದು, ಸ್ವಾಮೀಜಿಯ ಹತ್ಯೆಗೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಳಗಾವಿಯಲ್ಲಿ ಸ್ವಾಮೀಜಿ ಅವರ ಮರಣೋತ್ತರ ಕಾರ್ಯವನ್ನು ನಡೆಸಲಾಗಿದ್ದು, ಪಾರ್ಥಿವ ಶರೀರವನ್ನು ಆಶ್ರಮಕ್ಕೆ ತಂದು ಅಂತ್ಯಕ್ರೀಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಆಶ್ರಮಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಭಾಗದಿಂದಲೂ ಕೂಡ ಭಕ್ತರು ಆಶ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಹಿರಿಯ ಅಧಿಕಾರಿಗಳು ಮಠದಲ್ಲಿ ಮೊಕ್ಕಾಂ ಹೂಡಿದ್ದು, ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

ನಂಬಿದವರಿಂದಲೇ ಹತ್ಯೆ ? ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ ?

ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಾರಾಯಣ ಮಾಣಿ ಹಾಗೂ ಹುಸೇನ್‌ ದಲಾತ್‌ ಪೊಲೀಸರ ವಶದಲ್ಲಿದ್ದಾರೆ. ಚಿಕ್ಕೋಡಿಯ ಹಿರೇಕೋಡಿ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಅವರು ಜುಲೈ 5 ರಿಂದ ನಾಪತ್ತೆಯಾಗಿದ್ದರು. ಈ ಕುರಿತು ಜುಲೈ 7 ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು. ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಗಳಾದ ನಾರಾಯಣ ಮಾಳಿ ಹಾಗೂ ಹುಸೇನ್‌ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಂತೆಯೇ ಹಲವು ಸ್ಪೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಜುಲೈ 5ರಂದು ಮಠದಲ್ಲಿಯೇ ಇದ್ದ ನಾರಾಯಣ ಮಾಳಿ ಆಶ್ರಮದಲ್ಲಿ ಅಡುಗೆ ಸಿಬ್ಬಂದಿ ಮನೆಗೆ ತೆರಳುತ್ತಿದ್ದ ಹಾಗೆ, ಸ್ವಾಮೀಜಿ ಅವರಿಗೆ ವಿದ್ಯುತ್‌ ಶಾಕ್‌ ನೀಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತನ್ನ ಸ್ನೇಹಿತ ಹುಸೇನ್‌ ಗೆ ಕರೆ ಮಾಡಿ ಆಶ್ರಮಕ್ಕೆ ಕರೆಯಿಸಿಕೊಂಡಿದ್ದಾನೆ. ಇಬ್ಬರೂ ಸೇರಿಕೊಂಡು ಸ್ವಾಮೀಜಿ ಅವರ ಶವವನ್ನು ಬೈಕಿನಲ್ಲಿ ನಾರಾಯಣ ಮಾಣಿ ತನ್ನ ಊರಾಗಿರುವ ಖಟಕಬಾವಿಗೆ ಕೊಂಡೊಯ್ದಿದ್ದಾನೆ. ಆಶ್ರಮದಿಂದ ಸುಮಾರು 39 ಕಿ.ಮೀ. ದೂರದಲ್ಲಿರುವ ಖಟಕಬಾವಿಗೆ ಬೈಕ್‌ನಲ್ಲಿಯೇ ಕೂರಿಸಿಕೊಂಡು ಹೋಗಿದ್ದ ಆರೋಪಿಗಳು ನಂತರ ತಮ್ಮದೇ ಜಮೀನಿನಲ್ಲಿ ಮಣ್ಣು ಮಾಡಲು ಪ್ಲ್ಯಾನ್‌ ಮಾಡಿದ್ದರು. ಸಿಕ್ಕಿ ಬೀಳುವ ಭಯದಲ್ಲಿ ಸ್ವಾಮೀಜಿ ಅವರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೊಳವೆ ಬಾವಿಗೆ ಎಸೆದು ಎಸ್ಕೇಪ್‌ ಆಗಿದ್ದರು.

ಸ್ವಾಮೀಜಿ ಪತ್ತೆಗಾಗಿ ಹುಡುಕಾಡಿದ್ದ ಆರೋಪಿಗಳು !

ಮಠದಲ್ಲಿ ಸ್ವಾಮೀಜಿ ನಾಪತ್ತೆಯಾಗಿರುವ ಸುದ್ದಿ ಎಲ್ಲೆಡೆ ಹರಡಿತ್ತು. ಭಕ್ತರು ಸ್ವಾಮೀಜಿಗಾಗಿ ಎರಡು ದಿನಗಳ ಕಾಲ ಹುಡುಕಾಟವನ್ನು ನಡೆಸಿದ್ದರು. ಈ ವೇಳೆಯಲ್ಲಿ ಆರೋಪಿಗಳು ಕೂಡ ಭಕ್ತರ ಜೊತೆಗೂಡಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ತಾವೇ ಸ್ವಾಮೀಜಿ ಅವರನ್ನು ಕೊಲೆ ಮಾಡಿರುವ ಕುರಿತು ಅನುಮಾನ ಬರಬಾರದು ಅನ್ನೋ ಸಲುವಾಗಿ ಆರೋಪಿಗಳು ನಾಟಕವಾಡಿದ್ದರು. ಆದರೆ ಇಬ್ಬರ ಚಲನವಲನದಲ್ಲಿ ಸಾಕಷ್ಟು ಅನುಮಾನ ಮೂಡಿಸಿತ್ತು. ಇದೇ ಕಾರಣಕ್ಕೆ ಪೊಲೀಸರು ಇಬ್ಬರನ್ನು ಅನುಮಾನದ ಹಿನ್ನೆಲೆಯಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ವೇಳೆಯಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ : JEE Student suicide : JEE ತರಬೇತಿ ನಿರತ ವಿದ್ಯಾರ್ಥಿ ಆತ್ಮಹತ್ಯೆ

ಇದನ್ನೂ ಓದಿ : Crime News : ತೆಕ್ಕಟ್ಟೆ : ಸ್ಕೂಟಿ ಸ್ಕಿಡ್‌ ಆಗಿ ಉದ್ಯಮಿ ಸಾವು ಪ್ರಕರಣ : ಮೃತರ ಮನೆಗೆ ಶಾಸಕ ಕಿರಣ್‌ ಕೊಡ್ಗಿ ಭೇಟಿ

6 ಲಕ್ಷಕ್ಕಾಗಿ ನಡೆದಿತ್ತಾ ಸ್ವಾಮೀಜಿಯ ಹತ್ಯೆ ?
ಇನ್ನು ಜೈನ ಸ್ವಾಮೀಜಿಯ ಹತ್ಯೆಗೆ ಪ್ರಮುಖವಾಗಿ ಹಣಕಾಸಿನ ವ್ಯವಹಾರ ಅನ್ನೋದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಸ್ವಾಮೀಜಿ ಆರೋಪಿಗಳಿಗೆ 6 ಲಕ್ಷ ರೂಪಾಯಿ ಸಾಲವನ್ನು ನೀಡಿದ್ದರು. ಆದರೆ ಸ್ವಾಮೀಜಿ ಸಾಲವನ್ನು ವಾಪಾಸ್‌ ನೀಡಲು ಬಲವಂತ ಮಾಡುತ್ತಿದ್ದಂತೆಯೇ ಇಬ್ಬರೂ ಸೇರಿಕೊಂಡು ಸ್ವಾಮೀಜಿಯ ಹತ್ಯೆಗೆ ಸ್ಕೆಚ್‌ ಹಾಕಿದ್ದರು. ಕೇವಲ ಹಣಕಾಸಿನ ವಿಚಾರಕ್ಕೆ ಈ ಹತ್ಯೆ ನಡೆದಿದ್ಯಾ, ಇಲ್ಲಾ ಬೇರೆ ಕಾರಣಗಳೇನಾದ್ರೂ ಇದೆಯಾ ಅನ್ನೋ ಬಗ್ಗೆಯೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Jain Muni murder case : Jain Muni Acharya Shri 108 Kamkumarnandi Maharaj murder case, all preparations for cremation

Comments are closed.