ಬೆಂಗಳೂರು : ಬಾಣಂತಿ ಪತ್ನಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ದಂತ ವೈದ್ಯ ಡಾ. ರೇವಂತ್ ಪ್ರಕರಣದಲ್ಲಿ ದಿನಕ್ಕೊಂದು ಮಾಹಿತಿ ಹೊರಬರುತ್ತಿದೆ.

ಫೆಬ್ರವರಿ 17ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಲಕ್ಷ್ಮೀಪುರದ ತನ್ನ ಮನೆಯಲ್ಲಿ ಡಾ. ರೇವಂತ್ ಪತ್ನಿ ಕವಿತಾಳನ್ನು ಹತ್ಯೆ ಮಾಡಿದ್ದ. ನಂತರಮನೆಯಲ್ಲಿದ್ದ ಪತ್ನಿಯ ಚಿನ್ನಾಭರಣಗಳನ್ನು ತನ್ನ ಪ್ರೇಯಸಿ ಹರ್ಷಿತಾಗೆ ಕೋರಿಯರ್ ಮಾಡಿರೋದು ಪತ್ತೆಯಾಗಿದೆ. ಕೊರಿಯರ್ನಲ್ಲಿ ಬಂದಿದ್ದ ಚಿನ್ನಾಭರಣಗಳನ್ನು ಕಡೂರು ಪೊಲೀಸರು ಜಪ್ತಿ ಮಾಡಿದ್ದಾರೆ.

ಪತಿ ಡಾ.ರೇವಂತ್ ಅನೈತಿಕ ಸಂಬಂಧದ ವಿಚಾರವಾಗಿ ರೇವಂತ್ ಹಾಗೂ ಕವಿತಾ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಪತ್ನಿ ಕವಿತಾಳನ್ನು ಕೊಲೆ ಮಾಡುವ ದಿನ ಡಾ.ರೇವಂತ್ ಕವಿತಾಳನ್ನು ಜ್ಯುವೆಲರಿ ಶಾಪ್ಗೆ ಕರೆದೊಯ್ದು ಮಗುವಿಗೆ ಬೆಳ್ಳಿಯ ವಳ್ಳೆ ಕೊಡಿಸಿದ್ದ. ಮಧ್ಯಾಹ್ನ 3:22ಕ್ಕೆ ಮನೆಗೆ ಬಂದಿದ್ದ ರೇವಂತ್, ಪತ್ನಿ ಕವಿತಾಗೆ ಎರಡು ಬಾರಿ ಇಂಜೆಕ್ಷನ್ ಕೊಟ್ಟು ನಿದ್ರೆಗೆ ಜಾರಿಸಿದ್ದ. ನಂತರ ಕವಿತಾಳನ್ನು ಕಾರ್ ಶೆಡ್ಗೆ ಎಳೆದೊಯ್ದು ಚಾಕುವಿನಿಂದ ಕುತ್ತಿಗೆ ಕೊಯ್ದ ಭೀಕರವಾಗಿ ಹತ್ಯೆ ಮಾಡಿದ್ದ. ದರೋಡೆಕೋರರ ಕೃತ್ಯವೆಂದು ಬಿಂಬಿಸೋ ಸಲುವಾಗಿ ಮನೆಯಲ್ಲಿದ್ದ ಆಕೆಯ ಚಿನ್ಮಾಭರಣಗಳನ್ನು ಕೊಂಡೊಯ್ದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತನ್ನ ಪ್ರೇಯಸಿ ಹರ್ಷಿತಾಗೆ ಕೋರಿಯರ್ ಮಾಡಿದ್ದ.

ಆದರೆ ಅದ್ಯಾವಾಗ ರೇವಂತ್ ಪೊಲೀಸರ ಕೈಗೆ ಸಿಕ್ಕಿಹಾಕೊಳ್ಳೋದು ಖಚಿತವಾಗುತ್ತಿದ್ದಂತೆಯೇ ರೈಲಿಗೆ ತಲೆಕೊಟ್ಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ರೇವಂತ್ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಹರ್ಷಿತಾ ಕೂಡ ತನ್ನ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾಳೆ. ಪ್ರಕರಣ ಸಂಬಂಧ ಬೆಂಗಳೂರಿನ ರಾಜರಾಜೇಶ್ವರಿನಗರ ಹಾಗೂ ಕಡೂರಿನ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.