ಸುದ್ದಿ ವಾಹಿನಿಯ ಖ್ಯಾತ ನಿರೂಪಕ ಗಜಾನನ ಹೆಗಡೆ ವಿಧಿವಶ : ಕಂಬನಿ ಮಿಡಿದ ಮಾಧ್ಯಮಲೋಕ

0

ಬೆಂಗಳೂರು : ಕನ್ನಡ ಸುದ್ದಿ ಮಾಧ್ಯಮ ಲೋಕದಲ್ಲಿ ವಿಭಿನ್ನ ನಿರೂಪಣೆಯ ಮೂಲಕ ಜನಮೆಚ್ಚುಗೆ ಪಡೆದಿದ್ದ ಖ್ಯಾತ ನಿರೂಪಕ ಗಜಾನನ ಹೆಗಡೆ ವಿಧಿ ವಶರಾಗಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಟಿ.ಆರ್.ಹಾಸ್ಪಿಟಲ್ ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಗಜಾನನ ಹೆಗಡೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿರಸಿ ಮೂಲದವರಾಗಿರೋ ಗಜಾನನ ಹೆಗಡೆ, ಧಾರವಾಡ ಜೆಎಸ್ ಎಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.

ಈಟಿವಿ ಮೂಲಕ ಸುದ್ದಿ ಜಗತ್ತಿಗೆ ಕಾಲಿರಿಸಿದ ಗಜಾನನ ಹೆಗಡೆ ಅವರು, ಕನ್ನಡ ಮಾಧ್ಯಮ ಲೋಕದಲ್ಲಿ ತನ್ನದೇ ಪ್ರಖ್ಯಾತಿಯನ್ನ ಗಳಿಸಿದವರು. ಈಟಿವಿ, ಝಿ ಟಿವಿ, ಕಸ್ತೂರಿ ನ್ಯೂಸ್, ಪ್ರಜಾಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಪ್ರಜಾ ಟವಿಯ ಮೊದಲ ನಿರೂಪಕರು ಅನ್ನೋ ಖ್ಯಾತಿಗೂ ಪಾತ್ರರಾಗಿದ್ದಾರೆ. ಹೊಸದಾಗಿ ಮಾಧ್ಯಮ ಲೋಕಕ್ಕೆ ಕಾಲಿರಿಸಿದವರಿಗೆ ಗುರುವಾಗಿ, ಮಾರ್ಗದರ್ಶಕರಾಗಿಯೂ ಗುರುತಿಸಿಕೊಂಡವರು.

ನಿರೂಪಕರಾಗಿ ಮಾತ್ರವಲ್ಲದೇ ಶಾಸ್ತ್ರೀಯ ಗಾಯಕರಾಗಿರೂ ಗಜಾನನ ಹೆಗಡೆ ಅವರು ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ ಖ್ಯಾತಿಯೂ ಇವರಿಗಿದೆ.

ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನ ಅಗಲಿಸಿದ್ದಾರೆ. ಸರಳ ಸೌಮ್ಯ ಸ್ವಭಾವದ ಹಿರಿಯ ಪತ್ರಕರ್ತ ಗಜಾನನ ಹೆಗಡೆ ಅವರ ನಿಧನಕ್ಕೆ ಮಾಧ್ಯಮ ಲೋಕ ಕಂಬನಿ ಮಿಡಿದಿದೆ. ಮೃತರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಹಿರಿಯ ಪತ್ರಕರ್ತ ದಿ.ಗಜಾನನ ಹೆಗಡೆ ಅವರ ಸಂಗೀತ ಲೋಕ…..ಬಹಳ ಅಪರೂಪದ ವಿಡಿಯೋ

https://www.youtube.com/watch?v=8vTgo7Y-M00

Leave A Reply

Your email address will not be published.