ಕುಂದಾಪುರ : ಫೈನಾನ್ಸ್ ಸಂಸ್ಥೆಯ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ ಕರಾವಳಿಯನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಲುದಾರ ಅನೂಪ್ ಶೆಟ್ಟಿಯೇ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಳಾವರದಲ್ಲಿರುವ ಡ್ರೀಮ್ಸ್ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ (33 ವರ್ಷ) ಎಂಬಾತನನ್ನು ಫೈನಾನ್ಸ್‌ನಲ್ಲಿಯೇ ಬರ್ಭರವಾಗಿ ಹತ್ಯೆ ಮಾಡಲಾಗಿತ್ತು. ಫೈನಾನ್ಸ್‌ನಲ್ಲಿ ಅಜೇಂದ್ರ ಶೆಟ್ಟಿಯನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಕೊಲೆಗೆ ಮಾರಕಾಸ್ತ್ರಗಳನ್ನು ಬಳಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರು ಫೈನಾನ್ಸ್ ಬಳಿ ಹುಡುಕಿಕೊಂಡು ಬಂದಾಗ ಅಜೇಂದ್ರ ಶೆಟ್ಟಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಕೋಟೇಶ್ವರದ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಅಷ್ಟರಲ್ಲಾಗಲೇ ಅಜೇಂದ್ರ ಶೆಟ್ಟಿ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಇನ್ನು ಪ್ರಕರಣದ ತನಿಖೆಗೆ ಇಳಿದ ಕಂಡ್ಲೂರು ಠಾಣೆಯ ಪೊಲೀಸರು ಹಲವು ಆಯಾಮಗಳಲ್ಲಿ ಮಾಹಿತಿಯನ್ನು ಕೆಲೆ ಹಾಕಿದ್ದಾರೆ. ಕೊಲೆ ನಡೆದ ಬೆನ್ನಲ್ಲೇ ಡ್ರೀಮ್ಸ್ ಫೈನಾನ್ಸ್ ಪಾಲುದಾರ ಅನೂಪ್ ಶೆಟ್ಟಿ ಮೊಬೈಲ್ ನಾಟ್ ರೀಚಬಲ್ ಆಗಿತ್ತು. ಅಲ್ಲದೇ ಅನೂಪ್ ಶೆಟ್ಟಿ ಬೈಕ್ ಫೈನಾನ್ಸ್ ಬಳಿಯಲ್ಲಿಯೇ ಪತ್ತೆಯಾಗಿತ್ತು. ಇನ್ನು ರಾತ್ರಿ ಅನೂಪ್ ಹಾಗೂ ಅಜೇಂದ್ರ ಶೆಟ್ಟಿ ಫೈನಾನ್ಸ್‌ನಲ್ಲಿ ಒಟ್ಟಿಗೆ ಇದ್ದರು ಅನ್ನೋ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪೊಲೀಸರಿಗೆ ಅನೂಪ್ ಶೆಟ್ಟಿಯ ಮೇಲೆಯೇ ಅನುಮಾನ ವ್ಯಕ್ತವಾಗಿತ್ತು.

ಕುಂದಾಪುರ ಸುತ್ತಮುತ್ತ ಹಾಗೂ ಟೋಲ್‌ಗೇಟ್‌ನಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಅನೂಪ್ ಶೆಟ್ಟಿ ಕಾರಾವಾರದ ಕಡೆಗೆ ಪ್ರಯಾಣ ಬೆಳೆಸಿರುವುದು ಖಚಿತವಾಗಿತ್ತು. ಅನೂಪ್ ಶೆಟ್ಟಿ ಪರಾರಿಯಾಗಲು ಅಜೇಂದ್ರ ಶೆಟ್ಟಿ ಕಾರನ್ನೇ ಬಳಸಿಕೊಂಡಿದ್ದ ಅನ್ನೋದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ನಡೆಸಿ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.

2017ರಿಂದಲೂ ಕಾಳಾವಾರದಲ್ಲಿ ಡ್ರೀಮ್ ಫೈನಾನ್ಸ್ ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಅನೂಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ ನಡೆಸುತ್ತಿದ್ದರು. ಇಬ್ಬರೂ ಅನ್ಯೋನ್ಯವಾಗಿಯೇ ಫೈನಾನ್ಸ್ ವ್ಯವಹಾರವನ್ನು ನಡೆಸುತ್ತಿದ್ದರು. ಆದರೆ ಹಣಕಾಸಿನ ವಿಚಾರ, ಬಡ್ಡಿ ವಿಚಾರದಲ್ಲಿ ಇಬ್ಬರ ನಡುವೆ ಮನಸ್ಥಾಪ ಉಂಟಾಗಿತ್ತು. ಆದರೂ ಇಬ್ಬರೂ ಚೆನ್ನಾಗಿಯೇ ವ್ಯವಹಾರ ವನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವೈಷಮ್ಯ ಹೆಚ್ಚಾಗಿತ್ತು ಅನ್ನೋ ಮಾತುಗಳು ಕೇಳಿಬಂದಿವೆ ಎನ್ನುತ್ತಿವೆ ಪೊಲೀಸ್ ಮೂಲಗಳು.

ಉಡುಪಿ ಎಸ್‍ಪಿ ವಿಷ್ಣುವರ್ಧನ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಫೋರೆನ್ಸಿಕ್ ತಜ್ಞರ ತಂಡ ಪರಿಶೀಲನೆ ನಡೆಸಿದೆ. ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.