ಬೆಂಗಳೂರು : ವಸತಿ ಗೃಹದ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಸಹೋದ್ಯೋಗಿಗಳು ಸ್ನಾನ ಮಾಡುವುದು, ಬಟ್ಟೆ ಬದಲಿಸುವುದನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ನರ್ಸ್ ಒಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಈ ಘಟನೆ ನಡೆದಿದ್ದು, ನರ್ಸ್ ಅಶ್ವಿನಿ ಎಂಬಾಕೆಯನ್ನು ಬಂಧಿಸಿದ್ದು, ಪ್ರಿಯಕರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಅಲ್ಲದೇ ಪ್ರಕರಣದಲ್ಲಿ ಹಲವು ಬಾಗಿಯಾಗಿರುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ವೈಟ್ ಫೀಲ್ಡ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅಶ್ವಿನಿ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ನೀಡಿದ್ದ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದಳು. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಗಳು ವಸತಿ ಗೃಹದಲ್ಲಿ ವಾಸವಾಗಿದ್ದರು.
ಆದರೆ ಸಂಜೆಯ ಹೊತ್ತಲ್ಲಿ ನರ್ಸ್ ಒಬ್ಬರು ಸ್ನಾನ ಮಾಡೋದಕ್ಕೆ ಹೋಗಿದ್ದ ವೇಳೆಯಲ್ಲಿ ಶೌಚಾಲಯದಲ್ಲಿ ಮೊಬೈಲ್ ಇಟ್ಟಿರುವುದು ಕಾಣಿಸಿತ್ತು. ಗಾಬರಿಗೊಂಡ ನರ್ಸ್, ತಕ್ಷಣ ಬಟ್ಟೆ ಧರಿಸಿಕೊಂಡು ಮೊಬೈಲ್ ತೆಗೆದುಕೊಂಡು ಪರಿಶೀಲನೆ ನಡೆಸಿದ್ದು, ವಿಡಿಯೋ ರೆಕಾರ್ಡ್ ಆನ್ ಆಗಿರುವುದು ಕಂಡುಬಂದಿದೆ. ಸಂತ್ರಸ್ತ ನರ್ಸ್, ಮೊಬೈಲ್ನಲ್ಲಿನ ಫೋಟೋ ಗ್ಯಾಲರಿಯಲ್ಲಿ ಪರಿಶೀಲನೆ ನಡೆಸಿದಾಗ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳು ಸ್ನಾನ ಮಾಡುವ ದೃಶ್ಯಾವಳಿ ಸೆರೆಯಾಗಿತ್ತು. ಕೂಡಲೇ ವಸತಿ ಗೃಹದ ಮೇಲ್ವಿಚಾರಕಿಗೆ ಸಂತ್ರಸ್ತೆ ಮೊಬೈಲ್ ಒಪ್ಪಿಸಿ, ದೂರು ನೀಡಿದ್ದರು.
ಈ ವೇಳೆಯಲ್ಲಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದಾಗ ಶೌಚಾಲಯದಲ್ಲಿ ಪತ್ತೆಯಾಗಿರುವ ಮೊಬೈಲ್ ಅಶ್ವಿನಿಯದ್ದು ಎಂದು ಗೊತ್ತಾಗಿದೆ. ಅಲ್ಲದೇ ಅಶ್ವಿನಿ ವಿಚಾರಣೆಯ ವೇಳೆಯಲ್ಲಿ ತಾನು ಸೆರೆ ಹಿಡಿದಿರುವ ವಿಡಿಯೋಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಅಲ್ಲದೇ ಪ್ರಕರಣದಲ್ಲಿ ಹಲವರು ಬಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಟ್ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.