ಮಂಗಳೂರು : ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಕೂಡ ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಹಾಡುಹಗಲೇ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಏಳಿಂಜೆಯಲ್ಲಿ ನಡೆದಿದೆ. ನಿವೃತ್ತ ಸೈನಿಕರಾಗಿರೋ ವಿನ್ಸೆಂಟ್ ಡಿಸೋಜಾ (48 ವರ್ಷ) ಹಾಗೂ ಪತ್ನಿ ಹೆಲಿನ್ ಡಿಸೋಜಾ (43 ವರ್ಷ) ಎಂಬವರೇ ಹತ್ಯೆಯಾದ ದಂಪತಿ.

ದಂಪತಿಯನ್ನು ಹತ್ಯೆ ಮಾಡಿರುವ ಆರೋಪಿ ಅಲ್ಪನ್ಸ್ ಸಲ್ದಾನ (51 ವರ್ಷ) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೈನಿಕರಾಗಿದ್ದ ವಿನ್ಸೆಂಟ್ ಡಿಸೋಜಾ ಹಲವು ವರ್ಷಗಳಿಂದಲೂ ವಿದೇಶಿ ಹಡಗಿನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚಿಗಷ್ಟೇ ಮನೆಗೆ ಬಂದಿದ್ದರು.

ಪಕ್ಕದ ಮನೆಯಲ್ಲಿದ್ದ ಆರೋಪಿ ಅಲ್ಪನ್ಸ್ ಸಲ್ದಾನ ಹಾಗೂ ವಿನ್ಸೆಂಟ್ ಡಿಸೋಜಾ ಅವರ ಮನೆಯ ಕಾಂಪೌಂಡ್ ಗೋಡೆಗೆ ಮರವೊಂದು ತಾಗಿಕೊಂಡಿದ್ದು. ಇದೇ ವಿಚಾರವಾಗಿ ಎರಡೂ ಮನೆಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಇದೇ ವಿಚಾರಕ್ಕೆ ಇಂದೂ ಕೂಡ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಲುಪಿದಾಗ ಅಲ್ಪನ್ಸ್ ಡಿಸೋಜಾ ಚಾಕು, ಪಿಕ್ಕಾಸು ಹಾಗೂ ಹಾರೆಯಿಂದ ಹಲ್ಲೆ ನಡೆಸಿದ್ದಾರೆ.

ಘಟನೆಯಿಂದಾಗಿ ವಿನ್ಸೆಂಟ್ ಡಿಸೋಜಾ ಹಾಗೂ ಪತ್ನಿ ಹೆಲಿನ್ ಡಿಸೋಜಾ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿನ್ಸೆಂಟ್ ಡಿಸೋಜಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಹೆಲಿನ್ ಡಿಸೋಜಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷಾ, ಎಸಿಪಿ ಬೆಳ್ಳಿಯಪ್ಪ ಹಾಗೂ ಮೂಲ್ಕಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.