ಬೆಂಗಳೂರು : ಕನ್ನಡದ ಕಿರುತೆರೆ ನಟಿಯೋರ್ವರು ವರದಕ್ಷಿಣೆ ಕಿರುಕುಳಕ್ಕ ಬೇಸತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕನ್ನಡ ಹಾಗೂ ತಮಿಳು ಧಾರವಾಹಿಗಳಲ್ಲಿ ನಟಿಸಿರುವ ಈ ನಟಿ ಇದೀಗ ಗಂಡ ಹಾಗೂ ಅತ್ತೆ ಮಾವನ ವಿರುದ್ದ ದೂರು ನೀಡಿದ್ದಾರೆ. ಗಂಡನ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

ಬೆಂಗಳೂರಿನ ಯಲಹಂಕ ನಿವಾಸಿಯಾಗಿರುವ 23 ವರ್ಷದ ಕಿರುತೆರೆ ನಟಿ ಸುಮಾರು 4 ವರ್ಷಗಳ ಹಿಂದೆ ಮೈಸೂರಿನ ಪೊಲೀಸ್ ಭವನದಲ್ಲಿ ಪ್ರೀತಂ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯ ನಂತರದಲ್ಲಿ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಗಂಡ ಪ್ರೀತಮ್ ಹಾಗೂ ಪ್ರೀತಮ್ ತಂದೆ ರಾಜಶೇಖರ್ ಹಾಗೂ ಅತ್ತೆ ಶಶಿಕಲಾ ಸೇರಿಕೊಂಡು ಧಾರವಾಹಿಗಳಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ. ಅದರಂತೆಯೇ ನಟಿ ಕನ್ನಡ ಹಾಗೂ ತಮಿಳು ಧಾರವಾಹಿಗಳಲ್ಲಿಯೂ ನಟಿಸಿದ್ದಾರೆ. ನಟನೆಯಿಂದ ಬಂದ ಹಣವನ್ನು ಗಂಡ, ಅತ್ತೆ ಹಾಗೂ ಮಾವ ಪಡೆದುಕೊಂಡಿದ್ದಾರೆ. ತನಗೆ ಧಾರವಾಹಿಯಲ್ಲಿ ನಟಿಸಲು ಇಷ್ಟವಿಲ್ಲ ಎಂದಿದ್ದಕ್ಕೆ ತನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಅಂತಾ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮದುವೆಯ ಸಂದರ್ಭದಲ್ಲಿ 5.50 ಲಕ್ಷ ರೂ. ನಗದು ಸೇರಿದಂತೆ ಚಿನ್ನಾಭರಣಗಳನ್ನು ವರದಕ್ಷಿಣೆಯ ರೂಪದಲ್ಲಿ ನೀಡಲಾಗಿತ್ತು. ಅಲ್ಲದೇ ತನಗೆ ಸುಮಾರು 300 ಗ್ರಾಂ ಚಿನ್ನದ ಆಭರಣ, 2 ಕೆಜಿ ಬೆಳ್ಳಿ ಆಭರಣವನ್ನು ಪೋಷಕರು ನೀಡಿದ್ದರು. ಆದರೆ ನಂತರದಲ್ಲಿಯೂ ಗಂಡ ಹಾಗೂ ಅತ್ತೆ ಮಾವ ತವರಿನಿಂದ ಮತ್ತೆ 3 ಲಕ್ಷ ರೂಪಾಯಿಯನ್ನು ತರವಂತೆ ಪೀಡಿಸುತ್ತಿದ್ದಾರೆ. ತಾನು ಧಾರವಾಹಿಯಲ್ಲಿ ನಟಿಸೋದಿಲ್ಲ ಎಂದಿದ್ದಕ್ಕೆ ತನ್ನನ್ನು ಮನೆಯಿಂದ ಹೊರ ಹಾಕಿದ್ದು, ತನ್ನ ಪೋಷಕರೊಂದಿಗೆ ಗಂಡನ ಮನೆಗೆ ತೆರಳಿದಾಗ ಮಗನಿಗೆ ಬೇರೊಂದು ಮದುವೆಯಾಗಿದೆ ಎಂದು ಹೇಳಿದ್ದಾರೆ.

ಹೀಗಾಗಿ ತನಗೆ ನ್ಯಾಯ ಕೊಡಿಸಬೇಕು ಅಂತಾ ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಿರುತೆರೆ ನಟಿ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.