Udupi Constable Suicide Case : ರಾಜೇಶ್‌ ಕುಂದರ್‌ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಡೆತ್‌ನೋಟ್‌ನಲ್ಲಿದೆ ನಾಲ್ವರ ಹೆಸರು

ಉಡುಪಿ : ಆದಿಉಡುಪಿ ಪ್ರೌಢಶಾಲೆಯ ರೈಫಲ್ ನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ರಾಜೇಶ್ ಕುಂದರ್ ಪ್ರಕರಣಕ್ಕೆ (Udupi Constable Suicide Case) ಹೊಸ ತಿರುವು ಸಿಕ್ಕಿದೆ. ರಾಜೇಶ್‌ ಕುಂದರ್‌ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ ಪತ್ತೆಯಾಗಿದ್ದು, ನಾಲ್ವರು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಮೂವರ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದಿ ಉಡುಪಿಯ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಭದ್ರತಾ ಕರ್ತವ್ಯಕ್ಕೆ ರಾಜೇಶ್‌ ಕುಂದರ್‌ ಅವರನ್ನು ನಿಯೋಜನೆ ಮಾಡಲಾಗಿತ್ತು. ಉತ್ತರ ಪತ್ರಿಕೆ ಇರಿಸಲಾಗಿದ್ದ ಸ್ಟ್ರಾಂಗ್‌ ರೂಮ್‌ ಎದುರು ಕುಳಿತ ಸ್ಥಿತಿಯಲ್ಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ರಾಜೇಶ್‌ ಕುಂದರ್‌ ಅವರ ಶವ ಪತ್ತೆಯಾಗಿತ್ತು. 300 ಯಾರ್ಡ್‌ ರೇಂಜ್‌ ಹೊಂದಿರುವ ರೈಫಲ್‌ 5 ಬುಲೆಟ್‌ಗಳನ್ನು ತುಂಬಿಸಿರುವ ಸಾಮರ್ಥ್ಯವನ್ನು ಹೊಂದಿರುವ 203 ರೈಫಲ್‌ ರಾಜೇಶ್‌ ಅವರನ್ನು ಬಲಿ ಪಡೆದುಕೊಂಡಿತ್ತು.

ರಾಜೇಶ್‌ ಕುಂದರ್‌ ಆತ್ಮಹತ್ಯೆ ಪ್ರಕರಣ ಕರಾವಳಿಯಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದೆ. ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ ಬ್ಯಾಗ್ ಒಂದರಲ್ಲಿ ರಾಜೇಶ್ ಕುಂದರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜೇಶ್‌ ಕುಂದರ್‌ ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಪೊಲೀಸ್ ಕಾನ್ಸ್ ಸ್ಟೇಬಲ್ ಗಳಾದ ಉಮೇಶ್, ಮಹಮ್ಮದ್ ಆಶ್ಫಕ್ ಹಾಗೂ ಗಂಗೊಳ್ಳಿ ಎಸ್.ಐ ನಂಜ ನಾಯ್ಕ ಕಾರಣ ಎಂದು ಉಲ್ಲೇಖಿಸಿದ್ದಾರೆ. ಮೂವರು ಮಾತ್ರವಲ್ಲದೇ ಮತ್ತೋರ್ವರು ತನಗೆ ಹಿಂಸೆ ನೀಡಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆ ನಾಲ್ಕನೇ ವ್ಯಕ್ತಿ ಯಾರು ಎನ್ನುವ ಕುರಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಆ ನಾಲ್ಕನೇ ವ್ಯಕ್ತಿ ಹಿರಿಯ ಪೊಲೀಸ್‌ ಅಧಿಕಾರಿ ಅನ್ನೋ ಮಾತುಗಳು ಕೇಳಿಬರುತ್ತಿವೆ.

ರಾಜೇಶ್‌ ಕುಂದರ್‌ ಡೆತ್‌ನೋಟ್‌ ಆಧಾರದ ಮೇಲೆ ಉಡುಪಿ ನಗರ ಠಾಣೆಯ ಸರ್ಕಲ್‌ ಇನ್ಸ್ಪೆಕ್ಟರ್‌ ಪ್ರಮೋದ್‌ ಕುಮಾರ್‌ ತನಿಖೆಯನ್ನು ನಡೆಸುತ್ತಿದ್ದಾರೆ. ರಾಜೇಶ್‌ ಕುಂದರ್‌ ಕುಟುಂಬಸ್ಥರು ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಎಸ್‌ಪಿ ವಿಷ್ಣುವರ್ಧನ್‌ ಪ್ರತಿಕ್ರಿಯಿಸಿದ್ದು, ರಾಜೇಶ್‌ ಕುಂದರ್‌ ಅವರ ಡೆತ್‌ನೋಟ್‌ ಪತ್ತೆಯಾಗಿದ್ದು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ ಡೆತ್‌ನೋಟ್‌ನ್ನು ಹ್ಯಾಂಡ್‌ ರೈಟಿಂಗ್‌ ತಜ್ಞರಿಗೆ ಪರಿಶೀಲನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ : ಸಂಬಂಧಿಗಳಿಂದಲೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ : ಹಣಕ್ಕಾಗಿ ವಿಡಿಯೋ ಚಿತ್ರೀಕರಿಸಿದ ಪಾಪಿ ಪತಿ

ಇದನ್ನೂ ಓದಿ : ಕೆಲಸಕ್ಕೆ ಸೇರಿದ ಮೊದಲ ದಿನವೇ ಆಸ್ಪತ್ರೆಯಲ್ಲಿ ನರ್ಸ್‌ ಮೃತದೇಹ ಪತ್ತೆ : ಅತ್ಯಾಚಾರ ಆರೋಪ

Udupi Constable Suicide Case Rajesh Kundar Death Note Found

Comments are closed.