ಉಡುಪಿ : ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರ ಹಾವಳಿ ಹೆಚ್ಚಾಗಿದೆ. ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಡಿಮ್ಯಾಂಡ್ ಇಡ್ತಾ ಇದ್ದ ಖದೀಮರು ಇದೀಗ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಹೆಸರಲ್ಲೇ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ.

ಕಳೆದ ಕೆಲ ತಿಂಗಳಿನಿಂದಲೂ ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅವರ ಸ್ನೇಹಿತರಿಗೆ ತಾನು ಕಷ್ಟದಲ್ಲಿ ಇದ್ದೇನೆ ಹೀಗಾಗಿ ನನಗೆ ಹಣ ವನ್ನು ನೀಡುವಂತೆ ಬೇಡಿಕೆ ಇಡಲಾಗುತ್ತಿದೆ. ಜನ ಸಾಮಾನ್ಯರು, ರಾಜಕಾರಣಿ, ಅಧಿಕಾರಿಗಳ ಹೆಸರಲ್ಲಿಯೂ ನಕಲಿ ಖಾತೆಗಳನ್ನು ತೆರೆಯಲಾಗಿದೆ. ಸಾವಿರಾರು ಮಂದಿಯ ಹೆಸರಲ್ಲಿ ನಕಲಿ ಖಾತೆ ತೆರೆದು ಹಣವನ್ನು ಪಡೆದು ಕೊಂಡಿದ್ದಾರೆ.

ಇದೀಗ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಹೆಸರಲ್ಲಿ ಫೇಸ್ ಬುಕ್ ನಕಲಿ ಖಾತೆ ತೆರೆಯಲಾಗಿದೆ. ಜಿಲ್ಲಾಧಿಕಾರಿಗಳ ಹೆಸರಲ್ಲಿ 7 ಸಾವಿರ ರೂಪಾಯಿಗೆ ಡಿಮ್ಯಾಂಡ್ ಇಡಲಾಗಿದೆ. ನಕಲಿ ಖಾತೆ ತೆರೆದ ವಿಚಾರ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಯಾರೂ ಕೂಡ ನಕಲಿ ಖಾತೆಯನ್ನು ಫಾಲೋ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ಜನ ಸಾಮಾನ್ಯರಿಗೆ ತೆಲೆನೋವಾಗಿದ್ದ ನಕಲಿ ಖಾತೆಯ ಹಾವಳಿ ಇದೀಗ ಜಿಲ್ಲಾಧಿಕಾರಿಗಳನ್ನೂ ಬಿಟ್ಟಿಲ್ಲ. ಫೇಸ್ ಬುಕ್ ಮೂಲಕ ಯಾರಾದ್ರೂ ಹಣಕ್ಕೆ ಡಿಮ್ಯಾಂಡ್ ಇಟ್ರೆ, ಹಣ ನೀಡುವ ಮುನ್ನರ ಎಚ್ಚರವಹಿಸಿ.

ಯಾವುದಕ್ಕೂ ನಿಮ್ಮ ಸ್ನೇಹಿತರ ಬಳಿಯಲ್ಲಿ ಒಮ್ಮೆ ಖಚಿತ ಪಡಿಸಿ ಕೊಳ್ಳಿ, ಪೊಲೀಸ್ ಇಲಾಖೆ ಸೈಬರ್ ಖದೀಮರನ್ನು ಮಟ್ಟ ಹಾಕ ಬೇಕಾಗಿದೆ.