ಕೋಟ : ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ ಅಭಿಮತ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಖ್ಯಾತ ಸಿನಿ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಕೀರ್ತಿ ಕಳಸ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ರವಿ ಬೆಳೆಗೆರೆ ಮಾತನಾಡಿ, ಯೋಗರಾಜ್ ಭಟ್ಟರು ಕನ್ನಡ ಚಿತ್ರರಂಗಕ್ಕೆ ಮಾಂತ್ರಿಕ ಸ್ವರೂಪ ನೀಡಿದ ಸಾಹಿತಿ. ತನ್ನ ಸ್ವತಃ ಪರಿಶ್ರಮದ ಮೂಲಕ ಯಶಸ್ಸಿನ ಶಿಖರವೇರಿದ ಸಾಧಕ. ಅವರ ಸಾಹಿತ್ಯದ ಪ್ರತೀ ಸಾಲುಗಳು ಜೀವನೋತ್ಸಾಹವನ್ನು ತುಂಬುತ್ತವೆ ಎಂದು ಹೇಳಿದ್ದಾರೆ. ಇನ್ನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯೋಗರಾಜ್ ಭಟ್ ಅವರು, ನಾನು ಮೂಲತಃ ಮಂದಾರ್ತಿಯವ. ಹೀಗಾಗಿ ಇದು ನನ್ನ ಹುಟ್ಟೂರು. ಇಂದು ನನ್ನ ಹುಟ್ಟೂರಿನಲ್ಲಿ ಅಭಿನಂದನೆ ಪಡೆಯುತ್ತಿರೋದಕ್ಕೆ ತುಂಬಾ ಸಂತೋಷವಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಜನಸೇವಾ ಟ್ರಸ್ಟ್ ಇಷ್ಟೊಂದು ಅದ್ದೂರಿ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಉದ್ಯಮಿ ರತ್ನಾಕರ ಶೆಟ್ಟಿ ಬಡಾಮನೆ, ದೈನಾಡಿ ಪ್ರಕಾಶ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ. ಸಹನ ಸುರೇಂದ್ರ ಶೆಟ್ಟಿ, ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು, ರತ್ನಾಕರ ಶೆಟ್ಟಿ ಬಡಾಮನೆ, ಕಲ್ಗದ್ದೆ ಸುರೇಶ್ ಶೆಟ್ಟಿ, ವಕೀಲರಾದ ಟಿ.ಮಂಜುನಾಥ್ ಗಿಳಿಯಾರು, ಟ್ರಸ್ಟ್ ಅಧ್ಯಕ್ಷ ಅರುಣ್ ಶೆಟ್ಟಿ ಉಳ್ತೂರು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕ ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದ್ರೆ ಪ್ರವೀಣ್ ಯಕ್ಷಿಮಠ ಸ್ವಾಗತಿಸಿ, ನಾಗರಾಜ್ ಶೆಟ್ಟಿ ನೈಕಂಬ್ಳಿ ವಂದಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.


ಅಭಿಮತ ಸಂಭ್ರಮದಲ್ಲಿ ರಾಘವೇಂದ್ರ ಜನ್ಸಾಲೆ, ಪ್ರಸಾದ್ ಮೊಗೆಬೆಟ್ಟು, ಉದಯ ಕಡಬಾಳ ಹಾಗೂ ಅಶ್ವಿನಿ ಕೊಂಡಕುಳಿ ಅವರಿಂದ ಯಕ್ಷ ನಾಟ್ಯ ವೈಭವ ನೆರವೇರಿತು.


ಮಾತ್ರವಲ್ಲ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಸಾಂಸ್ಕೃತಿಕ ರಸದೌತಣವನ್ನೇ ಉಣಬಡಿಸಿದರು.




