ಯಾದಗಿರಿ : ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪುರಸಭಾ ವ್ಯಾಪ್ತಿಯ ಇಂದಿರಾನಗರದ ಬುಡ ಜಂಗಮರ ಕಾಲೋನಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ ಅವರು ದಿಢೀರ್ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದಲೂ ಬಡಜಂಗಮ ಕಾಲೋನಿಯ ಜನರು ಶೌಚಾಲಯ, ವಸತಿ, ವಿದ್ಯುತ್, ರಸ್ತೆ ಸೌಕರ್ಯ, ಪಡಿತರ ಆಹಾರ ಸೌಲಭ್ಯ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳಿಂದಲೂ ವಂಚಿತರಾಗಿದ್ದರು. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಅವರು ಗುರುಮಠಕಲ್ ಪುರಸಭಾ ಕಾರ್ಯ ನಿರ್ವಹಣಾಧಿಕಾರಿ ಶರಣಪ್ಪ ಮಡಿವಾಳರ ಜೊತೆಗೆ ಭೇಟಿ ನೀಡಿದ್ದಾರೆ. ಈ ವೇಳೆಯಲ್ಲಿ ಕಾಲೋನಿಯ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ.

ಈ ಕಾಲೋನಿಯಲ್ಲಿ ಸುಮಾರು 200 ಮಕ್ಕಳಿದ್ದಾರೆ. ಆದರೆ ಅಂಗನವಾಡಿ ಶಿಕ್ಷಕಿ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ಅಂಗನವಾಡಿ ಕೇಂದ್ರ ತೆರೆಯುವಂತೆ ಸೂಚನೆಯನ್ನು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಪುರಸಭಾ ವ್ಯಾಪ್ತಿ ಯಲ್ಲಿ ಇರುವ ದೇವರಾಜು ಅರಸು ಹುಡುಗರ ಮತ್ತು ಹುಡುಗಿಯರ ಹಾಸ್ಟೆಲ್ ಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳೊಂದಿಗೆ ಸಹಭೋಜನ ಮಾಡಿ ಆಹಾರ ಮತ್ತು ವ್ಯವಸ್ಥೆಯ ಬಗ್ಗೆಯೂ ಚರ್ಚಿಸಿದ್ದಾರೆ.

