ರಾಸಲೀಲೆ ಸಿಡಿ ಪ್ರಕರಣ : ರಾಜ್ಯ ಸರಕಾರದ ಮಹತ್ವದ ತೀರ್ಮಾನ

ಬೆಂಗಳೂರು : ರಾಜಕೀಯದಲ್ಲಿಯೇ ಸಂಚಲನ ಮೂಡಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯ ಕುರಿತು ರಾಜ್ಯ ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ತನಿಖೆಯ ಹೊಣೆಯನ್ನು ರಾಜ್ಯ ಸರಕಾರ ಎಸ್ ಐಟಿ (ವಿಶೇಷ ಕಾರ್ಯಪಡೆ) ಗೆ ವಹಿಸಿ ಆದೇಶ ಹೊರಡಿಸಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಯುವತಿಯೋರ್ವಳಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಅನ್ನೋ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರದಲ್ಲಿ ದಿನೇಶ್ ಕಲ್ಲಹಳ್ಳಿ ಅವರು ದೂರವನ್ನು ವಾಪಾಸ್ ಪಡೆದಿದ್ದರೂ ಕೂಡ ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಇದೀಗ ಪ್ರಕರಣ ತನಿಖೆಯ ಹೊಣೆಯನ್ನು ಎಸ್ ಐಟಿಗೆ ವಹಿಸಲಾಗಿದ್ದು, ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಎಲ್ಲಿ ತಯಾರಾಗಿದೆ. ಎಲ್ಲಿಂದ ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲಗಳಿಗೆ ಅಪ್ಲೋಡ್ ಆಗಿದೆ ಅನ್ನೋ ಕುರಿತು ಸಮಗ್ರ ತನಿಖೆಯನ್ನು ನಡೆಸಿ ರಾಜ್ಯ ಸರಕಾರ ವರದಿಯನ್ನು ಸಲ್ಲಿಸುವಂತೆ ಸೂಚಿಸಿರುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

Comments are closed.