ಬಾಗಲಕೋಟೆ : ಆತನಿಗೆ ಶಂಕಿತ ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿಯೇ ಆಸ್ಪತ್ರೆಗೆ ದಾಖಲಿಸಿ ಗಂಟಲಿನ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಆದ್ರೀಗ ವರದಿಯಲ್ಲಿ ಕೊರೊನಾ ಇರೋದು ದೃಢಪಡುತ್ತಿದ್ದಂತೆಯೇ ಆತನ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹೌದು, ಕೊರೊನಾ ಅನ್ನೋ ಮಹಾಮಾರಿ ಇಂದು ಜನರಲ್ಲಿ ಭಯವನ್ನು ಹುಟ್ಟಿಸಿದೆ. ಕೊರೊನಾ ಸೋಂಕು ಬಾಧಿಸುತ್ತಲೇ ಜನ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅಂತೆಯೇ ಬಾಗಲಕೋಟೆಯ 47 ವರ್ಷದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು.

ಹೀಗಾಗಿಯೇ ಅವರನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಒಂದು ದಿನದ ಬಳಿಕ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿ ಮನೆಯಲ್ಲಿಯೇ ಇದ್ದರು.

ಆದರೆ ಕೊರೊನಾ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದ್ರೀಗ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಮನೆ ಮಂದಿಯೆಲ್ಲಾ ಆತಂಕಕ್ಕೆ ಒಳಗಾಗಿದ್ದಾರೆ. ಅದ್ರಲ್ಲೂ ಕೊರೊನಾ ಸೋಂಕಿತ ವ್ಯಕ್ತಿಯ ತಾಯಿ ಕೊರೊನಾ ಶಾಕ್ ನಿಂದ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕಿತನ ತಾಯಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದು, ರಕ್ತದೊತ್ತಡದಿಂದ ಬಳಲುತ್ತಿದ್ದರು. ಇದೀಗ ಜಿಲ್ಲಾಡಳಿತ ಇಡೀ ಕುಟುಂಬವನ್ನೇ ಕ್ವಾರಂಟೈನ್ ಮಾಡಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.