ಉಡುಪಿ ಜಿಲ್ಲೆಯಲ್ಲಿಲ್ಲ ಕೊರೊನಾ ಸೋಂಕಿತರು, ದೇಶವೇ ಮೆಚ್ಚಿತು ಜಿಲ್ಲಾಡಳಿತ ಕಾರ್ಯ !

0

ಉಡುಪಿ : ದೇಶ, ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇದೀಗ ಯಾವುದೇ ಕೊರೊನಾ ಸೋಂಕಿತರಿಲ್ಲ. ಸೋಂಕು ಕಾಣಸಿಕೊಂಡಿದ್ದ ಮೂವರು ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗಿದ್ದಾರೆ. ಈ ಮೂಲಕ ಉಡುಪಿಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಉಡುಪಿ ಜಿಲ್ಲೆಯ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದ ವಾರದ ಇಬ್ಬರು ಕೊರೊನಾ ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ. ಆದ್ರೀಗ ಮತ್ತೋರ್ವ ಕೊರೊನಾ ಸೋಂಕಿತ ಕೂಡ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗಿದ್ದಾರೆ.

ಹೀಗಾಗಿ ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಿದೆ. ಕಳೆದ 10 ದಿನಗಳಿಂದಲೂ ಉಡುಪಿ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣಗಳೂ ದಾಖಲಾಗಿಲ್ಲ. ಹೀಗಾಗಿ ಇನ್ನೂ 11 ದಿನಗಳ ಕಾಲ ಯಾವುದೇ ಕೊರೊನಾ ಪ್ರಕರಣ ದಾಖಲಾಗದೇ ಇದ್ರೆ ಉಡುಪಿ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಲಿದೆ.

ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಡುತ್ತಿದ್ದಂತೆಯೇ ಜಿಲ್ಲೆಯಲ್ಲಿಯೂ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರ ಆತಂಕಕ್ಕೂ ಕಾರಣವಾಗಿತ್ತು. ಆದರೆ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿದೆ.

ಕ್ವಾರಂಟೈನ್ ಆದೇಶ ಪಾಲನೆ ಮಾಡದವರ ವಿರುದ್ದ ಮುಲಾಜಿಲ್ಲದೇ ಪೊಲೀಸ್ ಇಲಾಖೆ ಕ್ರಮಕೈಗೊಂಡಿದೆ. ಆರೋಗ್ಯ ಇಲಾಖೆಯು ಮುತುವರ್ಜಿಯಿಂದಲೇ ಕಾರ್ಯನಿರ್ವಹಿಸಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಕಾಳಜಿಗೆ ಉಡುಪಿ ಜಿಲ್ಲೆಯ ಜನತೆ ಕೂಡ ಸಾಥ್ ಕೊಟ್ಟಿದ್ದಾರೆ. ಹೀಗಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಕಾರ್ಯ ಇದೀಗ ದೇಶದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಇಲ್ಲದೇ ಇದ್ರೂ, ಲಾಕ್ ಡೌನ್ ಆದೇಶವನ್ನು ಸಡಿಲಗೊಳಿಸುವುದಿಲ್ಲ. ಅಲ್ಲದೇ ಗಡಿಯೊಳಗೆ ಯಾರಿಗೂ ಪ್ರವೇಶ ನೀಡುವುದಿಲ್ಲಾ ಅಂತಾ ಜಿ.ಜಗದೀಶ್ ಅವರು ಖಡಕ್ ಸೂಚನೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಮುತುವರ್ಜಿಯಿಂದಾಗಿ ಉಡುಪಿ ಜಿಲ್ಲೆಯ ಜನತೆ ನಿರಾಳರಾಗಿದ್ದಾರೆ.

Leave A Reply

Your email address will not be published.