ಕೋಲಾರ : ಲಾಕ್ ಡೌನ್ ಸಡಿಲಿಕೆಯ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯದಂಗಡಿಗಳು ಓಪನ್ ಆಗಿದ್ದವು. ಮದ್ಯದಂಗಡಿ ಓಪನ್ ಆಗಿ ಕೇವಲ ಒಂದೇ ಒಂದು ವಾರದಲ್ಲಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಬರೋಬ್ಬರಿ 1,000 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ವ್ಯಾಪಿಸುತ್ತಲೇ ಕೇಂದ್ರ ಸರಕಾರ 42 ದಿನಗಳ ಕಾಲ ಎರಡು ಹಂತಗಳಲ್ಲಿ ಲಾಕ್ ಡೌನ್ ಹೇರಿಕೆ ಮಾಡಿತ್ತು. ಇದರಿಂದಾಗಿ ಮದ್ಯದಂಗಡಿಗಳು ಮುಚ್ಚಿದ್ದರಿಂದಾಗಿ ರಾಜ್ಯ ಸರಕಾರಕ್ಕೆ 3,000 ಕೋಟಿ ರೂಪಾಯಿ ನಷ್ಟ ಸಂಭವಿಸಿತ್ತು. ಆದ್ರೆ ಇದೀಗ ಮದ್ಯದಂಗಡಿ ಓಪನ್ ಆಗಿ ಕೇವಲ 1 ವಾರಕ್ಕೆ ಬರೋಬ್ಬರಿ 1,000 ಕೋಟಿ ರೂಪಾಯಿ ಆದಾಯ ದೊರೆತಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
ಪ್ರಸಕ್ತ ಸಾಲಿಗೆ 22,500 ಕೋಟಿ ರೂ ಗುರಿಯಿದ್ದು ಶೇ. 17 ರಷ್ಟು ಅಬಕಾರಿ ಸುಂಕ ಹೆಚ್ಚಳದಿಂದ ೨೫೦೦ ಕೋಟಿ ರೂ ಹೆಚ್ಚುವರಿ ಆದಾಯ ಸಿಗಲಿದ್ದು ಒಟ್ಟು 25000 ಗುರಿ ಹೊಂದಿದಂತಾಗಿದೆ. ಲಾಕ್ ಡೌನ್ ಸಡಿಲಿಸಲಾಗಿದೆ ಎಂದು ಶಿಸ್ತು ಪಾಲಿಸುವುದನ್ನು ಮರೆತರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.

ಅಲ್ಲದೇ ರಾಜ್ಯದ ಗಡಿಯಲ್ಲಿನ ಮದ್ಯದಂಗಡಿಗಳು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದು ಇತರೆಡೆ ಆಧಾರ್ ಕಾರ್ಡ್ ನಲ್ಲಿ ವಿಳಾಸ ಪರಿಶೀಲಿಸಿ ನಂತರವಷ್ಟೇ ಮದ್ಯ ನೀಡಲಾಗುತ್ತಿದೆ ಎಂದು ಸಚಿವ ನಾಗೇಶ್ ವಿವರಿಸಿದ್ದಾರೆ.