ಮೈಸೂರು ಜಿಲ್ಲಾಧಿಕಾರಿಯಾಗಿ ಡಾ.ಗೌತಮ್ ಬಗಾದಿ ಅಧಿಕಾರ ಸ್ವೀಕಾರ : ಬಗಾದಿ ಅವರ ಪತ್ನಿ ಮಂಡ್ಯ ಜಿಲ್ಲಾಧಿಕಾರಿ

ಮೈಸೂರು : ಮಹಿಳಾ ಐಪಿಎಸ್ ಅಧಿಕಾರಿಗಳ ತಿಕ್ಕಾಟದಿಂದ ತೆರವಾಗಿದ್ದ ಮೈಸೂರು ಜಿಲ್ಲಾಧಿಕಾರಿಗಳ ಹುದ್ದೆಗೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ಗೌತಮ್ ಬಗಾದಿ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ ಮೈಸೂರು ಜಿಲ್ಲಾಧಿಕಾರಿಯಗಳ ಪತ್ನಿ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಅನ್ನೋದೆ ವಿಶೇಷ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ನಡುವೆ ಬಹಿರಂಗವಾಗಿಯೇ ತಿಕ್ಕಾಟ ನಡೆದಿತ್ತು. ಮಾತ್ರವಲ್ಲ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿಗಳ ಮಧ್ಯಪ್ರವೇಶದ ನಡುವಲ್ಲೂ ರಾಜಿಯಾಗಿರಲಿಲ್ಲ. ಕೊನೆಗೆ ರಾಜ್ಯ ಸರಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಡಾ. ಗೌತಮ್ ಬಗಾದಿ ಅವರನ್ನು ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.

ಮೈಸೂರಿನ ಜಿಲ್ಲಾಧಿಕಾರಿಯಾಗಿ ಡಾ.ಗೌತಮ್ ಬಗಾದಿ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆಂಧ್ರಮೂಲದವರಾಗಿರುವ ಬಗಾದಿ ಅವರು ಕೇರಳ ಮೂಲದ ಐಎಎಸ್ ಅಧಿಕಾರಿಯಾಗಿರುವ ಅಶ್ವಥಿ ಪ್ರೀತಿಸಿ 2019ರಲ್ಲಿ ಮದುವೆಯಾಗಿದ್ದರು. ಶೌಚಾಲಯ ನಿರ್ಮಾಣದ ಮೂಲಕ ಬಗಾದಿ ಅವರ ಪತ್ನಿ ಎಸ್.ಅಶ್ವಥಿ ಅವರು ಕ್ರಾಂತಿಯನ್ನೇ ಮಾಡಿದ್ದಾರೆ. ಪ್ರಸ್ತುತ ಮಂಡ್ಯ ಜಿಲ್ಲಾಧಿಕಾರಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದು, ಇದೀಗ ಬಗಾದಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಮೈಸೂರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳ ಪತಿ, ಪತ್ನಿಯಾಗಿರೋದು ಇದು ಎರಡನೇ ಬಾರಿ. ಈ ಹಿಂದೆ ಶಿಖಾ ಅವರು ಮೈಸೂರು ಜಿಲ್ಲಾಧಿಕಾರಿ ಯಾಗಿದ್ದಾಗ ಅವರ ಪತಿ ಅಜಯ್ ನಾಗಭೂಷಣ್ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಮೈಸೂರಿನಲ್ಲಿ ಕೊರೊನಾ ಸೋಂಕಿನ ಆರ್ಭಟ ಜೋರಾಗಿದ್ದು, ಡಾ. ಗೌತಮ್ ಬಗಾದಿ ಕೊರೊನಾ ಸೋಂಕಿನ ಆರ್ಭಟಕ್ಕೆ ಮೂಗುದಾರ ಹಾಕ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

Comments are closed.