ಮೈಸೂರಲ್ಲಿ ದೇಗುಲ ತೆರವಿಗೆ ಬ್ರೇಕ್‌ : ಸೆ.16ಕ್ಕೆ ಜಗದೀಶ್‌ ಕಾರಂತ್‌ ನೇತೃತ್ವದಲ್ಲಿ ಹೋರಾಟ

ಮೈಸೂರು : ಸುಪ್ರೀಂ ಕೋರ್ಟ್‌ ಆದೇಶದ ನೆಪದಲ್ಲಿ ಮೈಸೂರಿನಲ್ಲಿ ದೇವಾಲಯ ತೆರವಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದೆರಡೆ ಜನಪ್ರತಿನಿಧಿಗಳು ಸರಕಾರ ಹಾಗೂ ಜಿಲ್ಲಾಡಳಿತದ ನಿರ್ಧಾರವನ್ನು ವಿರೋಧಿಸುತ್ತಿದ್ದರೆ, ಇನ್ನೊಂದೆಡೆ ಹಿಂದೂ ಜಾಗರಣಾ ವೇದಿಕೆ ಬೃಹತ್‌ ಹೋರಾಟಕ್ಕೆ ಸಜ್ಜಾಗಿದೆ. ಈ ಬೆನ್ನಲ್ಲೇ ಅಧಿಕಾರಿಗಳು ದೇವಾಲಯ ತೆರವು ಕಾರ್ಯಾಚರಣೆಗೆ ಸದ್ಯಕ್ಕೆ ಬ್ರೇಕ್‌ ಹಾಕಿದ್ದಾರೆ.

ಮೈಸೂರಿನಲ್ಲಿರುವ ಒಟ್ಟು 93 ಧಾರ್ಮಿಕ ಕೇಂದ್ರಗಳ ತೆರವು ಮಾಡಲು ಮುಂದಾಗಿದ್ದು, ಇದರಲ್ಲಿ 87 ದೇವಸ್ಥಾನಗಳು ಒಳಗೊಂಡಿದೆ. ಮೈಸೂರು ನಗರದಲ್ಲಿರುವ ಹಲವು ದೇವಾಲಯಗಳನ್ನು ತೆರವು ಮಾಡಲು ಈಗಾಗಲೇ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿದ್ದು, ದಿನಾಂಕವನ್ನು ಘೋಷಣೆ ಮಾಡಿದೆ. ದೇವಾಲಯ ತೆರವಿಗೆ ಮುಂದಾಗುತ್ತಿದ್ದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೋರಾಟಕ್ಕೆ ಇಳಿಯುವುದಾಗಿಯೂ ಘೋಷಣೆಯನ್ನು ಮಾಡಿದ್ದಾರೆ.

ಇನ್ನೊಂದೆಡೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಬೃಹತ್‌ ಹೋರಾಟಕ್ಕೆ ಸಿದ್ದತೆಯನ್ನು ನಡೆಸಿದೆ. ಸಪ್ಟೆಂಬರ್‌ 16 ರಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಭಾರತದ ಪ್ರಮುಖರಾದ ಜಗದೀಶ್‌ ಕಾರಂತ್‌ ಮೈಸೂರಿಗೆ ಆಗಮಿಸಿದ್ದಾರೆ. ಅಂದು ನಗರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದ್ದು, ಜಗದೀಶ್‌ ಕಾರಂತ್‌ ಅವರು ಸಭೆಯಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರು ಜಿಲ್ಲಾಡಳಿತ ಸುಪ್ರೀಂ ಕೋರ್ಟ್‌ ಹೊರಡಿಸಿರುವ ಆದೇಶವನ್ನು ತಪ್ಪಾಗಿ ಅರ್ಥೈಯಿಸಿಕೊಂಡಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಸುಪ್ರೀಂ ಆದೇಶದ ಪ್ರಕಾರ ೨೦೧೯ರ ನಂತರದಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳ ಸ್ಥಳಾಂತರಕ್ಕೆ ಸೂಚಿಸಿದೆ. ಅಲ್ಲದೇ ಪ್ರತೀ ದೇವಾಲಯಗಳನ್ನು ಪ್ರತ್ಯೇಕ ಪ್ರಕರಣವೆಂದು ಭಾವಿಸುವಂತೆಯೂ ಸೂಚಿಸಿದೆ. ಆದರೆ ಸುಪ್ರೀಂ ಕೋರ್ಟ್‌ ಎಲ್ಲಿಯೂ ದೇವಾಲಯಗಳನ್ನು ತೆರವು ನೀಡಬೇಕೆಂದು ಹೇಳಿಲ್ಲ. ಹೀಗಾಗಿ ಜಿಲ್ಲಾಡಳಿತ ಆದೇಶವನ್ನು ತಪ್ಪಾಗಿ ಅರ್ಥೈಯಿಸಿಕೊಂಡಿದೆ ಎಂದು ಸಂಸದ ಪ್ರತಾಪ್‌ ಸಿಂಹ್‌ ಅವರು ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಈ ಹಿಂದೆಯೇ ರಸ್ತೆ ಪಕ್ಕದಲ್ಲಿರುವ ದೇವಸ್ಥಾನಗಳನ್ನು ಸ್ಥಳಾಂತರ ಮಾಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಹಲವು ಕಡೆಗಳಲ್ಲಿರುವ ಹಲವು ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರ ಮಾಡಿದೆ. ಆದರೆ ಭಕ್ತರ ವಿರೋಧ ವ್ಯಕ್ತವಾಗಿರುವ ಕಡೆಗಳಲ್ಲಿ ಜನರೊಂದಿಗೆ ಚರ್ಚಿಸಿ ಪರ್ಯಾಯ ನಿರ್ಧಾರಗಳನ್ನು ಕೈಗೊಂಡಿದೆ. ಇದೀಗ ಮೈಸೂರು ಜಿಲ್ಲಾಡಳಿತ ಭಕ್ತರ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ.‌

ಇದನ್ನೂ ಓದಿ : ಹಿಂದೂ ದೇವಾಲಯಗಳ ತೆರವು ವಿವಾದ : ಮೈಸೂರು ಜಿಲ್ಲಾಡಳಿತಕ್ಕೆ ಪ್ರಶ್ನೆಗಳ ಸುರಿಮಳೆಗೈದ ಸಂಸದ ಪ್ರತಾಪ್ ಸಿಂಹ

ಇದನ್ನೂ ಓದಿ : ಹಿಂದೂ ದೇವಾಲಯಗಳ ತೆರವು ; ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

( Officials who have stopped clearing temples in Mysore )

Comments are closed.