ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ್ದ ಭೀಕರ ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಮತ್ತು ಲಾರಿ ಚಾಲಕ ಅರ್ಜುನ್ ಪತ್ತೆಯಾಗಿದ್ದಾರೆ.
ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಎಪ್ಪತ್ತೊಂದು ದಿನಗಳ ಬಳಿಕ ಇಂದು ಪತ್ತೆಯಾಗಿದ್ದು, ಚಾಲಕ ಅರ್ಜುನ್ ಮೃತದೇಹ ಲಾರಿಯ ಕ್ಯಾಬಿನ್ ಒಳಗೆ ಸಿಲುಕಿಕೊಂಡಿದ್ದ ರೀತಿಯಲ್ಲಿ ಪತ್ತೆಯಾಗಿದೆ.

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದಿದ್ದ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಮತ್ತು ಲಾರಿಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಸತತ ಕಾರ್ಯಾಚರಣೆ ನಡೆಸಿದ್ದರು. ಆದರೆ ಲಾರಿ ಪತ್ತೆಯಾಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ಕಳೆದ ಆರು ದಿನಗಳಿಂದ ನಡೆಯುತ್ತಿರುವ ಮತ್ತೆ ಆರಂಭಗೊಂಡಿದ್ದ ಕಾರ್ಯಾಚರಣೆಯಲ್ಲಿ ಬಾರ್ಜ್ ಮೂಲಕ ನದಿಯಲ್ಲಿ ಲಾರಿ ಹಾಗೂ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಇಂದು ನದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅರ್ಜುನ್ ಮೃತದೇಹ ಹಾಗೂ ಲಾರಿ ಪತ್ತೆಯಾಗಿದ್ದು, ಗುಡ್ಡ ಕುಸಿತದ ಹೊಡೆತಕ್ಕೆ ಸಿಕ್ಕಿ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿ ಹೋಗಿದೆ.

ಚಾಲಕ ಅರ್ಜುನ್ ಮೃತ ದೇಹ ಎರಡು ತುಂಡುಗಳಾಗಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುರಂತದಲ್ಲಿ ಕಣ್ಮರೆಯಾಗಿರುವ ಇನ್ನೂ ಇಬ್ಬರು ಪತ್ತೆಯಾಗಬೇಕಿದೆ. ಭಾರತ್ ಬೆಂಜ್ ಲಾರಿ ಪಲ್ಟಿಯಾಗಿ ನದಿಯಲ್ಲಿ ಬಿದ್ದಿದ್ದು, ಬಾನೆಟ್ ಮತ್ತು ಮುಂಭಾಗ ಮಾತ್ರ ಪತ್ತೆಯಾಗಿದ್ದು, ಲಾರಿಯ ಹಿಂಭಾಗ ಇನ್ನಷ್ಟೇ ದೊರೆಯಬೇಕಿದೆ. ಗಂಗಾವಳಿ ನದಿಯ ತೀರದಿಂದ 40 ಮೀಟರ್ ದೂರದಲ್ಲಿ ನದಿಯ ಆಳದಲ್ಲಿ ಲಾರಿ ಪತ್ತೆಯಾಗಿದೆ. ಇಂದು ಲಾರಿ ಪತ್ತೆಯಾಗಿರುವ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಬೆಂಜ್ ಲಾರಿಯ ಲಾಸ್ಟ್ ಲೊಕೇಶನ್ ಗುರುತಿಸಲಾಗಿತ್ತು.
ಇನ್ನು ಶಿರೂರಿನಲ್ಲಿ ಲಾರಿ ಪತ್ತೆಯಾದ ಬಳಿಕ ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅಬ್ಬರದ ಮಳೆಯಿಂದ ಲಾರಿ ಪತ್ತೆ ಅಗಲು ತಡ ಆಯಿತು ಎಂದು ತಿಳಿಸಿದ್ದಾರೆ. ಲಾರಿಯಲ್ಲೇ ಮೃತ ದೇಹ ಸಿಕ್ಕಿರುವುದರಿಂದ ಅದು ಅರ್ಜುನದು ಎನ್ನಬಹುದು ಎಂದಿರುವ ಜಿಲ್ಲಾಧಿಕಾರಿ, ಡಿಎನ್ಎ ಟೆಸ್ಟ್ ಮಾಡಿ ವರದಿ ಬಂದ ಬಳಿಕ ಅರ್ಜುನ್ ಮೃತ ದೇಹವನ್ನು ಎರಡು ದಿನಗಳ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಮಗೆ ದೂರು ಬಂದ ಪೈಕಿ ಕಣ್ಮರೆಯಾದ ಇಬ್ಬರು ಸಿಗಬೇಕಿದ್ದು, ಇನ್ನೂ ಐದು ದಿನ ಡ್ರೆಜ್ಜಿಂಗ್ ಮತ್ತು ಬಾರ್ಜ್ ಮೂಲಕ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.