ಮಂಡ್ಯ : ಆ ಗ್ರಾಮದ ಜನರಿಗೆ ಕತ್ತಲಾದ್ರೆ ಸಾಕು ಒಂದು ರೀತಿಯ ಭಯ ಕಾಡೋದಕ್ಕೆ ಶುರುವಾಗುತ್ತೆ. ಮನೆಯಲ್ಲಿದ್ದ ಸಾಕಿದ್ದ ಕುರಿ, ಮೇಕೆಗಳನ್ನು ಚಿರತೆ ಕೊಂದು ಹಾಕುತ್ತಾ, ಇಲ್ಲಾ ತಮ್ಮ ಪ್ರಾಣಕ್ಕೆ ಕುತ್ತು ತರುತ್ತಾ ಅನ್ನೋ ಆತಂಕದಲ್ಲಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮಸ್ಥರು ನಿತ್ಯವೂ ಚಿರತೆಯ ಭಯದಲ್ಲಿಯೇ ಬದಕುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿರತೆಗಳು ಗ್ರಾಮದ ಜನರ ನಿದ್ದೆ ಗೆಡಿಸಿದೆ. ದನ, ಮೇಕೆ, ಕುರಿಗಳನ್ನು ಹೊಲದಲ್ಲಿ ಮೇಯಲು ಬಿಟ್ರೆ ಚಿರತೆಗಳು ಕೊಂದು ತಿನ್ನುತ್ತಿವೆ. ಸಾಕು ಪ್ರಾಣಿಗಳು ಸಿಗದೇ ಹೋದ್ರೆ ಮನುಷ್ಯರ ಮೇಲೆಯೂ ದಾಳಿ ನಡೆಸುತ್ತಿವೆ. ಹೀಗಾಗಿಯೇ ದೇವಲಾಪುರ ಗ್ರಾಮದ ಜನತೆ ಭಯದಲ್ಲಿಯೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ.ನರಭಕ್ಷಕ ಚಿರತೆಯನ್ನು ಸರೆ ಹಿಡಿಯುವ ಕುರಿತು ಈಗಾಗಲೇ ಅರಣ್ಯಾಧಿಕಾರಿಗಳಿಗೆ ಎಷ್ಟೇ ದೂರುಗಳನ್ನು ಕೊಟ್ರು ಪ್ರಯೋಜನಾಗಿಲ್ಲ. ಹೀಗಾಗಿ ಇಲ್ಲಿನ ಗ್ರಾಮಸ್ಥರು ನೆಮ್ಮದಿಯಿಲ್ಲದ ರಾತ್ರಿಯನ್ನು ಕಾಣುತ್ತಿದ್ದಾರೆ. ಅಷ್ಟೇ ಯಾಕೆ ಹಗಲಿನ ಹೊತ್ತಲ್ಲೂ ಭಯದಲ್ಲಿಯೇ ಬದುಕುತ್ತಿದ್ದಾರೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಗ್ರಾಮಸ್ಥರ ಚಿರತೆಯ ಭಯವನ್ನು ಹೋಗಲಾಡಿಸಬೇಕಾಗಿದೆ.
