ಮಡಿಕೇರಿ : ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆದ್ರೆ ಮೈಸೂರಿನಲ್ಲಿ ವರ್ತಕರು ವೀಕೆಂಡ್ ಲಾಕ್‌ಡೌನ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೈಸೂರಿಗೆ ವೀಕೆಂಡ್ ಲಾಕ್‌ಡೌನ್ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.1ಕ್ಕಿಂತಲೂ ಕಡಿಮೆಯಿದೆ. ಅಲ್ಲದೇ ವರ್ತಕರು, ವ್ಯಾಪಾರಿಗಳು ವೀಕೆಂಡ್ ಲಾಕ್‌ಡೌನ್ ಮಾಡಲು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೇ.1ಕ್ಕಿಂತ ಕಡಿಮೆ ಕೊರೊನಾ ಸೋಂಕಿತ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್‌ಡೌನ್ ತೆರವುಗೊಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಮೈಸೂರು ಜಿಲ್ಲೆಯಲ್ಲಿಯೂ ನಿರ್ಬಂಧ ತೆರವುಗೊಳಿಸುವ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಮಾತಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಸಚಿವ ಆನಂದ್ ಸಿಂಗ್ ಕುರಿತು ಮಾತನಾಡಿದ, ಸಚಿವ ಸೋಮಶೇಖರ್ ಅವರು, ಆನಂದ್ ಸಿಂಗ್ ಅವರಿಗೆ ಯಾವುದೇ ಮುನಿಸು ಇಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ. ಆದರೆ ಸಚಿವ ಸಂಪುಟ ಸಭೆಗೆ ಗೈರಾಗುವ ಕುರಿಉ ಅನುಮತಿಯನ್ನು ಪಡೆದುಕೊಂಡಿದ್ದರು ಎಂದಿದ್ದಾರೆ.