ಮೈಸೂರು: ಈ ಬಾರಿಯ ನಾಡಹಬ್ಬ ದಸರಾ (Dasara) ದಲ್ಲಿ ಭಾಗವಹಿಸಿದ್ದ ಗಜ ಪಡೆ ಜಂಬೂ ಸವಾರಿ ಮುಗಿಸಿ ಇಂದು ಮೈಸೂರು ಅರಮನೆಯಿಂದ ಕಾಡಿಗೆ ವಾಪಾಸಾಗಿವೆ.
ಅಂಬಾರಿ ಹೊತ್ತ ಅಭಿಮನ್ಯು(Abhimanyu) ನೇತೃತ್ವದ ಹದಿನಾಲ್ಕು ಆನೆಗಳೊಂದಿಗೆ ಮಾವುತರು ಮತ್ತು ಕಾವಾಡಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಡಿಗೆ ವಾಪಸಾಗಿದ್ದಾರೆ.ಇಂದು ಮೈಸೂರು ಅರಮನೆ ಆವರಣದಲ್ಲಿ ದಸರಾ ಜಂಬೂ ಸವಾರಿ ನಡೆಸಿಕೊಟ್ಟ ಗಜಪಡೆಗೆ ಸಾಂಪ್ರದಾಯಿಕ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯಿತು. ನಂತರ ಲಾರಿಗಳ ಮೂಲಕ ಆನೆಗಳನ್ನು ವಾಪಸ್ ಕಾಡಿಗೆ ಕರೆದೊಯ್ಯಲಾಗಿದೆ.

ಮೈಸೂರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ವತಿಯಿಂದ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಹದಿನಾಲ್ಕು ಆನೆಗಳಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಗಜಪಡೆಗೆ ಬೀಳ್ಕೊಡುಗೆ ಕಾರ್ಯಕ್ರಮ ನೋಡಲು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು.
ಆಗಸ್ಟ್ 24 ರಿಂದ ಆರಂಭವಾಗಿದ್ದ ಗಜಪಯಣದ ಮೂಲಕ ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳು ಸುಮಾರು ಒಂದೂ ಮುಕ್ಕಾಲು ತಿಂಗಳ ಕಾಲ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು ಒಲ್ಲದ ಮನಸ್ಸಿನಿಂದ ಲಾರಿಗಳನ್ನು ಹತ್ತಿ ತಮ್ಮ ತಮ್ಮ ಕ್ಯಾಂಪ್ ಗಳತ್ತ ಹಿಂತಿರುಗಿವೆ.

ಇದೇ ವೇಳೆ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸ್ತಬ್ಧ ಚಿತ್ರಗಳಿಗೆ ಬಹುಮಾನಗಳನ್ನು ಘೋಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯಿಂದ ಪ್ರಸ್ತುತ ಪಡಿಸಿದ್ದ ರಂಗನತಿಟ್ಟು ಪಕ್ಷಿಧಾಮ, ಕೃಷ್ಣರಾಜ ಸಾಗರ ಅಣೆಕಟ್ಟು ಸ್ಥಬ್ದಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಇನ್ನು ಧಾರವಾಡ ಜಿಲ್ಲೆಯ ಇಸ್ರೋ ಗಗನಯಾನದ ಸ್ಥಬ್ದಚಿತ್ರಕ್ಕೆ ದ್ವಿತೀಯ ಬಹುಮಾನ ಮತ್ತು ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡಿನ ಕುರಿತ ಸ್ಥಬ್ದಚಿತ್ರಕ್ಕೆ ತೃತೀಯ ಬಹುಮಾನ ದೊರೆತಿದೆ.
ಇದೇ ವೇಳೆ, ಉಡುಪಿ, ಗದಗ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸ್ತಬ್ಧಚಿತ್ರಗಳಿಗೆ ಸಮಾಧಾನಕರ ಬಹುಮಾನ ನೀಡಲಾಗಿದೆ.ಇಲಾಖೆಯ ಸ್ಥಬ್ದಚಿತ್ರಗಳ ಪೈಕಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿದ್ಧ ವಿಶ್ವಗುರು ಬಸವಣ್ಣ, ಮಹಾತ್ಮ ಗಾಂಧಿ ಸ್ಥಬ್ದಚಿತ್ರಕ್ಕೆ ಪ್ರಥಮ ಬಹುಮಾನ ದೊರೆತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಬಹುಮಾನ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ ಮೂರನೇ ಬಹುಮಾನ ದೊರೆತಿದೆ. ಅಲ್ಲದೇ ಅರಣ್ಯ ಇಲಾಖೆ, ಕಾರ್ಮಿಕ ಇಲಾಖೆ, ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಕೈಗಾರಿಕಾಭಿವೃದ್ಧಿ ನಿಗಮ ಪ್ರಾಯೋಜಿಸಿದ್ದ ಸ್ತಬ್ಧ ಚಿತ್ರಗಳಿಗೆ ಸಮಾಧಾನಕರ ಬಹುಮಾನ ನೀಡಲಾಗಿದೆ.