ಕೊಡಗು : ಕಾಫಿನಾಡು ಕೊಡಗಿನ ಕರಿಕೆ ಗ್ರಾಮ ಸಾವಿರಾರು ವರ್ಷಗಳಿಂದ ನಾಟಿ ವೈದ್ಯ ಪರಂಪರೆಗೆ ಹೆಸರುವಾಸಿ. ಇಲ್ಲಿ ನಾಟಿ ವೈದ್ಯ ಪದ್ದತಿಯ ಪರಂಪರೆ ಬಹು ದೊಡ್ಡದು. ಹಲವಾರು ಮನೆಗಳು ಈ ನಾಟಿ ವೈದ್ಯ ಪದ್ದತಿಯನ್ನು ಅನುಸರಿಸುತ್ತಾ ಬರುತ್ತಿದ್ದವು. ಆದರೆ ಕಾಲ ಕ್ರಮೇಣ ನಾಟಿ ವೈದ್ಯ ಪದ್ದತಿ ಮರೆಯಾಗಿತ್ತಿದೆ. ಆದರೆ ಇಲ್ಲೊಬ್ಬರು ಮಹಿಳೆ ನಾಟಿ ವೈದ್ಯ ಪದ್ದತಿಯನ್ನು ಉಳಿಸಿಕೊಂಡು ಬರೋ ಮೂಲಕ ಹಲವರ ಪ್ರಾಣ ಉಳಿಸಿದ್ದಾರೆ.

ಪಶ್ವಿಮಘಟ್ಟದ ತಲಕಾವೇರಿ ವನ್ಯಧಾಮ ಅಂಚಿನಲ್ಲಿರುವ ಗ್ರಾಮ ಕರಿಕೆ. ಅತ್ತ ಸುಳ್ಯಕ್ಕೂ ಸನಿಹದಲ್ಲಿರುವ ಗ್ರಾಮ. ಈ ಗ್ರಾಮದ ಪರಂಪರೆಯನ್ನು ಉತ್ತುಂಗಕ್ಕೆ ಕೊಂಡು ಹೋದವರು ವೈದ್ಯ ರತ್ನ ಬೇಕಲ್ ಸೋಮನಾಥ್. ಕರ್ನಾಟಕ, ಕೇರಳದಲ್ಲಿ ಹೆಸರುವಾಸಿಯಾದ ಈ ನಾಟಿ ವೈದ್ಯ ಪರಂಪರೆಯನ್ನು ಅವರು ಮರಣಾನಂತರ ಮುಂದುವರಿಸಿದವರು ಅವರ ಸೊಸೆ ಬೇಕಲ್ ಲೀಲಾವತಿ ರಮಾನಾಥ್.

ವೈದ್ಯರತ್ನ ಸೋಮನಾಥ್ ರವರ ಪುತ್ರರಾದ ರಮಾನಾಥ್ ಕರಿಕೆಯವರನ್ನು ವಿವಾಹವಾದ ಮಂಡ್ಯ ಮೂಲದ ಬೇಕಲ್ ಲೀಲಾವತಿ ರಮನಾಥ್ ಈಗ ಪರಂಪರೆಯ ಶ್ರೀಮಂತ ಪರಂಪರೆಯನ್ನು ತಪಸ್ಸಿನಂತೆ ಮುಂದುವರಿಸಿ ಸಾವಿರಾರು ರೋಗಿಗಳಿಗೆ ಆಶ್ರಯದಾತರಾಗಿದ್ದಾರೆ. ವಿಷಜಂತುಗಳ ಕಡಿತ, ಕಾಮಾಲೆ ರೋಗ, ಎಂತಹ ನೋವುಗಳಿದ್ದರೂ ಕೂಡ ಅವುಗಳನ್ನು ನಿವಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸಾವಿರಾರು ಮಂದಿ ಲೀಲಾವತಿ ಅವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಓರ್ವ ಮಹಿಳಾ ನಾಟಿ ವೈದ್ಯೆಯಾಗಿ ತನ್ನ ಕುಟುಂಬದ ವಿದ್ಯೆಯನ್ನು ಜತನದಿಂದ ಕಲಿತು ಓರ್ವ ತಜ್ಞ ನಾಟಿ ವೈದ್ಯೆಯಾಗಿ ಗುರುತಿಸಿಕೊಂಡಿದ್ದಾರೆ. ಆಧುನಿಕ ಮಹಿಳೆಯರು ನಾಟಿ ವೈದ್ಯರಾಗದ ಸಂದರ್ಭದಲ್ಲಿ ಶ್ರೀಮತಿ ಬೇಕಲ್ ಲೀಲಾವತಿ ರಮಾನಾಥ್ ಅದನ್ನು ಸಾಧಿಸಿ ತೋರಿಸಿದ್ದಾರೆ.ಇಂದು ರಾಜ್ಯದ ಮೂಲೆ ಮೂಲೆಯಿಂದ ನೂರಾರು ರೋಗಿಗಳು ಇವರನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಇಂತಹ ಅಪೂರ್ವ ಸಾಧಕಿಗೆ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಒಂದು ದೊಡ್ಡ ಅಭಿನಂದನೆ ನೀಡಬೇಕಲ್ಲವೇ ?