ಕುಂದಾಪುರ : ಕಳೆದೊಂದು ವಾರದಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಸ್ಥಿತಿ ಎದುರಿಸಿ ಜನರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಉಡುಪಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಹಾಗೂ ನಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ಹಲವೆಡೆ ನೆರೆ ನೀರು ಹೆಚ್ಚಿದ್ದು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕುದ್ರು ಪ್ರದೇಶಗಳಲ್ಲಿ ನೆರೆಯ ಪ್ರಮಾಣ ಹೆಚ್ಚಿದ್ದು ಅಲ್ಲಿನ ಜನರಿಗೆ ಓಡಾಟಕ್ಕೆ ಅನುಕೂಲವಾಗುವಂತೆ ಸರಕಾರದಿಂದ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಲಾಗುತ್ತಿದೆ. ಮುಂದಿನ ಮೂರು ದಿನ ಆರೆಂಜ್ ಅಲರ್ಟ್ ಇರಲಿದ್ದು ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಮಳೆಯಿಂದಾಗಿ ಮನೆ ಹಾನಿ, ಪ್ರಾಣಹಾನಿ ಹಾಗೂ ಜಾನುವಾರು ನಷ್ಟಕ್ಕೆ ತಕ್ಷಣ ಪರಿಹಾರ ನೀಡಲು ಸರಕಾರ ಆದೇಶ ನೀಡಿದ್ದು ಅದರಂತೆಯೇ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ತುರ್ತು ಪರಿಹಾರನಿಧಿ ಖಾತೆಯಲ್ಲಿ ಸುಮಾರು 5 ಕೋಟಿ ಹಣವಿದ್ದು ಯಾವುದೇ ಸಮಸ್ಯೆಯಿಲ್ಲ ಎಂದರು.

ಉಡುಪಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ಉಪವಿಭಾಗಾಧಿಕಾರಿ ಕೆ. ರಾಜು, ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರಿ, ಸಿಪಿಐ ಸುರೇಶ್ ನಾಯಕ್, ಕಂದಾಯ ನಿರೀಕ್ಷಕ ಇ. ಕುಮಾರ್, ಗ್ರಾಪಂ ನಾವುಂದ ಕಾರ್ಯದರ್ಶಿ ಗಣೇಶ್ ದೇವಾಡಿಗ, ನಾವುಂದ ಗ್ರಾಮಕರಣಿಕ ಹನುಮಂತ ಮುಂತಾದವರು ಸಾಥ್ ನೀಡಿದ್ದಾರೆ.