ಅಂದು ತರಕಾರಿ ಮಾರುತ್ತಿದ್ದೆ. ಇಂದು ನಾಲ್ಕು ಬಾರಿ ಸಿಎಂ ಆಗಿದ್ದೇನೆ : ಯಡಿಯೂರಪ್ಪ

0

ಬೆಂಗಳೂರು : ಪ್ರೌಢಶಾಲೆಯಲ್ಲಿ ಓದುವಾಗ ನಾನು ತರಕಾರಿ, ನಿಂಬೆ ಹಣ್ಣು ಮಾರುತ್ತಿದ್ದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಹುಟ್ಟಿ ಹಲವು ಹಿರಿಯರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಆರೂವರೆ ಕೋಟಿ ಜನರ ನಾಡಿಗೆ ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಚಿತ ಲ್ಯಾಪ್‍ಟಾಪ್ ವಿತರಣೆ ಹಾಗೂ ಯುವ ಸಬಲೀಕರಣ ಕೇಂದ್ರಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ವಿದೇಶಿ ವ್ಯಾಮೋಹದಿಂದ ಹೊರಬಂದು, ನೂರಾರು ಮಂದಿಗೆ ಉದ್ಯೋಗ ನೀಡುವಂತಹ ಉದ್ಯಮಿಗಳಾಗುವಂತೆ ಸಂಕಲ್ಪ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ಮಾಡಿದರು..

ವಿದೇಶಿ ವ್ಯಾಮೋಹದಿಂದ ಹೊರ ಬಂದು ಪ್ರತಿಭಾವಂತರು ದೇಶದಲ್ಲೇ ನೆಲೆಸುವಂತಾಗಬೇಕು. ಯುವ ಸಮುದಾಯ ಆಚಾರ-ವಿಚಾರ-ಸಂಸ್ಕøತಿಯನ್ನು ಮರೆಯಬಾರದು. ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಲು ಅಭ್ಯಂತರವಿಲ್ಲ. ಆದರೆ ಅಲ್ಲೇ ನೆಲೆಸುವಂತಾಗಬಾರದು ಎಂದರು. ಯುವಕರು ಸಣ್ಣ ಪುಟ್ಟ ಕೈಗಾರಿಕೆ ಸ್ಥಾಪಿಸಿ ನೂರಾರು ಮಂದಿಗೆ ಉದ್ಯೋಗ ನೀಡುವ ಸಂಕಲ್ಪ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಭವ್ಯ ಭಾರತದ ಕನಸನ್ನು ನನಸು ಮಾಡಬೇಕು ಎಂದ ಅವರು, ಹಳ್ಳಿಯಿಂದ ಬೆಂಗಳೂರಿನವರೆಗೂ ಶಿಕ್ಷಣಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿದ್ದೇವೆ.

ಇಂಜಿನಿಯರ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಾಲವನ್ನು ಒದಗಿಸಲಾಗುತ್ತಿದೆ.ಸ್ವಾಭಿಮಾನದಿಂದ ಬದುಕುವುದರಿಂದ ಭಾರತವನ್ನು ಎತ್ತರಕ್ಕೆ ಬೆಳೆಸಬೇಕು ಎಂದು ತಿಳಿಸಿದರು. ವಿದೇಶದಲ್ಲಿರುವ ಯುವಕರು, ವಿದ್ಯಾವಂತರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ. ವಿವೇಕಾನಂದರ ಆದರ್ಶ ಪಾಲನೆ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಬಹಳಷ್ಟು ಜನರ ಬದುಕನ್ನು ವಿವೇಕಾನಂದರ ಆದರ್ಶಗಳು ಬದಲಿಸಿವೆ ಎಂದು ಹೇಳಿದರು.

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಬೆಂಗಳೂರು ಕೇಂದ್ರ ವಿವಿ ಉಪ ಕುಲಪತಿ ಎಸ್.ಜಾಫೆಟ್, ಬೆಂಗಳೂರು ಉತ್ತರ ವಿವಿ ಉಪ ಕುಲಪತಿ ಕೆಂಪರಾಜು, ಬೆಂಗಳೂರು ವಿವಿ ಉಪ ಕುಲಪತಿ ವೇಣುಗೋಪಾಲ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ, ಯುವ ಸಬಲೀಕರಣ ಇಲಾಖೆಯ ಡಾ.ಜಿ.ಕಲ್ಪನಾ,ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಅನಿರುದ್ಧ್ ಶ್ರವಣ್ ಮತ್ತಿತರರು ಇದ್ದರು.

Leave A Reply

Your email address will not be published.