ಬೆಂಗಳೂರು : ಒಂದೆಡೆ ಸಚಿವ ಸ್ಥಾನ ನೀಡುವಂತೆ ಬಿಜೆಪಿಯ ಶಾಸಕರು ಹಾಗೂ ಅನರ್ಹ ಶಾಸಕರು ಪಟ್ಟು ಹಿಡಿದಿದ್ದಾರೆ. ಆದ್ರೆ ಇನ್ನೊಂದೆಡೆ ಬಿಜೆಪಿಯ ಹೈಕಮಾಂಡ್ ಸಂಪುಟ ವಿಸ್ತರಣೆ ನಿರಾಸಕ್ತಿ ತೋರಿದೆ. ಹೀಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು ಯಡಿಯೂರಪ್ಪಗೆ ಮಗ್ಗಲು ಮುಳ್ಳಾಗಿದ್ದು, ಬಿಎಸ್ ವೈ ರಾಜಕೀಯ ಭವಿಷ್ಯ ಇಂದೇ ನಿರ್ಧಾರವಾಗೋ ಸಾಧ್ಯತೆಯಿದೆ.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಜೆಪಿಯಲ್ಲಿ ಬಣ ರಾಜಕೀಯ ಶುರುವಾಗಿತ್ತು. ಯಡಿಯೂರಪ್ಪನವರನ್ನು ಅಧಿಕಾರದಲ್ಲಿ ಕೂರಿಸಲು ರಾಜ್ಯ ಬಿಜೆಪಿಯ ಕೆಲ ಮುಖಂಡರು ಸೇರಿದಂತೆ ಖುದ್ದು ಬಿಜೆಪಿ ಹೈಕಮಾಂಡ್ ಗೆ ಮನಸಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಬಿಎಸ್ ವೈ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿದ್ದ ಬಿಜೆಪಿ, ಡಿಸೆಂಬರ್ ಅಂತ್ಯದವರೆಗೂ ಸಿಎಂ ಆಗಿರುವಂತೆಯೂ ಹೇಳಿತ್ತು. ಆದ್ರೆ ಉಪಚುನಾವಣೆ ಎದುರಾಗುತ್ತಿದ್ದಂತೆಯೇ ಬಿಜೆಪಿ ಸೈಲೆಂಟ್ ಆಗಿ ಯಡಿಯೂರಪ್ಪ ನೇತೃತ್ವದಲ್ಲಿಯೇ ಉಪಚುನಾವಣೆಯನ್ನು ಎದುರಿಸಿತ್ತು. ಅಲ್ಲದೇ ಅತೀ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತಿದ್ದಂತೆಯೇ ಇನ್ನೊಂದು ಬಣ ಸುಮ್ಮನಾಗಿತ್ತು,
ಆದ್ರೀಗ ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳಿಬರುತ್ತಿದ್ದಂತೆಯೇ ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿದೆ.

ಮೂಲ ಬಿಜೆಪಿ ಶಾಸಕರಿಗೆ ಹಾಗೂ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆ ಮಾಡುವುದು ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಿದೆ. ಎಲ್ಲಾ ಅನರ್ಹ ಶಾಸಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ರೆ, ಕೆಲ ನಾಯಕರು ಪ್ರಭಾವಿ ಹುದ್ದೆಯ ಮೇಲೆಯೇ ಕಣ್ಣಿಟ್ಟಿದ್ದಾರೆ. ಯಡಿಯೂರಪ್ಪ ಅಳೆದು ತೂಗಿ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಿದ್ದಾರೆ. ಆದ್ರೆ ಹೈಕಮಾಂಡ್ ಮಾತ್ರ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹೈಕಮಾಂಡ್ ನಿರಾಸಕ್ತಿ ಅನರ್ಹ ಶಾಸಕರನ್ನು ಕೆರಳಿಸಿದ್ದು, ಅನರ್ಹರು ಬಿಎಸ್ ವೈ ವಿರುದ್ದ ಮುಗಿಬಿದ್ದಿದ್ದಾರೆ.
ಸಂಪುಟ ವಿಸ್ತರಣೆ ಚರ್ಚೆ ಡೌಟು !
ರಾಜ್ಯದಲ್ಲಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ತಿಂಗಳೇ ಕಳೆದಿದೆ. ಸಂಕ್ರಾಂತಿಯ ಬೆನ್ನಲ್ಲೇ ಸಚಿವ ಸ್ಥಾನ ಸಿಗುತ್ತೆ ಅಂತಾ ಅನರ್ಹ ಶಾಸಕರು ಕಾದು ಕುಳಿತಿದ್ದಾರೆ. ಮಾತ್ರವಲ್ಲ ಸಚಿವ ಸ್ಥಾನ ನೀಡುವಂತೆ ಮಠಾಧೀಶರು, ಪ್ರಭಾವಿಗಳ ಮೂಲಕ ಯಡಿಯೂರಪ್ಪನ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾಗುತ್ತೇ ಅನ್ನೋ ಮಾತುಗಳು ಕೇಳಿಬರುತ್ತಿರೋ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಕುರಿತು ಶಾ ಸಮಾಲೋಚನೆ ನಡೆಸುತ್ತಾರೆ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಉನ್ನತ ಮೂಲಗಳ ಪ್ರಕಾರ ಅಮಿತ್ ಶಾ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸೋದು ಡೌಟು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬಿಜೆಪಿಯ ಪ್ರಭಾವಿ ಮುಖಂಡ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಣಕ್ಕೆ ಸುತಾರಾಂ ಇಷ್ಟವಿಲ್ಲ. ಆದ್ರೆ ಅಷ್ಟು ಸುಲಭಕ್ಕೆ ಯಡಿಯೂರಪ್ಪನವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸೋದಕ್ಕೆ ಸಾಧ್ಯವಿಲ್ಲ. ಸಾಲದಕ್ಕೆ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವು ಸಂತೋಷ್ ಬಣಕ್ಕೆ ನುಂಗಲಾರದ ತುತ್ತಾಗಿತ್ತು. ಹೀಗಾಗಿಯೇ ಇದೀಗ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಸಂತೋಷ್ ಅವರ ಬಣ ಕೈಯಾಡಿಸುತ್ತಿದ್ದು, ಹೈಕಮಾಂಡ್ ಮೇಲೆ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೇ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡೋದಕ್ಕೆ ಹೈಕಮಾಂಡ್ ಗೆ ಸುತಾರಾಂ ಮನಸಿಲ್ಲ. ಅಲ್ಲದೇ ಅನರ್ಹರು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮುಳುವಾಗುತ್ತಾರೆನ್ನುವ ಯೋಚನೆಯಲ್ಲಿದೆ ಹೈಕಮಾಂಡ್.

ಪತನವಾಗುತ್ತಾ ರಾಜ್ಯ ಸರಕಾರ ?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸುವಾಗ ವಯಸ್ಸಿನ ಅರ್ಹತೆ ಮುಳುವಾಗಿತ್ತು. ಆದ್ರೆ ಯಡಿಯೂರಪ್ಪನವರನ್ನು ಪಕ್ಷದಿಂದ ಹೊರಗಿಟ್ಟು ಚುನಾವಣೆ ಎದುರಿಸೋದಕ್ಕೆ ಬಿಜೆಪಿಗೆ ಭಯ. ಯಡಿಯೂರಪ್ಪ ಹೊಸ ಪಕ್ಷ ಕಟ್ಟಿದ್ರೆ ಪಕ್ಷಕ್ಕೆ ಮುಳುವಾಗೋದು ಖಚಿತ ಅನ್ನೋದು ಬಿಜೆಪಿ ನಾಯಕರಿಗೂ ಗೊತ್ತಿದೆ. ರಾಜ್ಯದಲ್ಲಿ ತಮ್ಮದೇ ಸರಕಾರ ಆಡಳಿತದಲ್ಲಿದ್ದರೂ ಕೂಡ ಕೇಂದ್ರ ಸರಕಾರ ಹೇಳಿಕೊಳ್ಳುವಂತಹ ಸಹಕಾರವನ್ನು ನೀಡಿಲ್ಲ. ನೆರೆ, ಬರ ಪರಿಹಾರದಲ್ಲಿಯೂ ಕೇಳಿದಷ್ಟು ಅನುದಾನವನ್ನು ನೀಡಿಲ್ಲ. ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ವಿರುದ್ದ ಮುನಿಸಿಕೊಂಡಿದ್ದರೂ ಕೂಡ ಬಹಿರಂಗವಾಗಿ ತೋರ್ಪಡಿಸಿಕೊಳ್ಳುತ್ತಿಲ್ಲ. ಇದೀಗ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ತೊಡಕಾದ್ರೆ ಅನರ್ಹ ಶಾಸಕರು ಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ದ ಸಿಡಿದೇಳುವುದು ಖಚಿತ. ಕೊಟ್ಟ ಮಾತನ್ನು ಉಳಿಸಿಕೊಳ್ಳೋದಕ್ಕೆ ಯಡಿಯೂರಪ್ಪ ಮುಂದಾದ್ರೆ ಹೈಕಮಾಂಡ್ ವಿರುದ್ದವೇ ತೊಡೆತಟ್ಟಿನಿಲ್ಲಬೇಕಾದ ಸ್ಥಿತಿ ಎದುರಾಗಬಹುದು. ಇಲ್ಲಾ ಯಡಿಯೂರಪ್ಪ ನೀಡಿದ ಸಚಿವಾಕಾಂಕ್ಷಿಗಳ ಪಟ್ಟಿಗೆ ವಿರುದ್ದವಾದ ಪಟ್ಟಿಯನ್ನು ಅಮಿತ್ ಶಾ ನೀಡಿದ್ರೂ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ಕುತ್ತುತರೋ ಸಾಧ್ಯತೆಯಿದೆ. ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡದೇ ಇದ್ರೆ ಸರಕಾರದ ಪತನಕ್ಕೂ ಮುಂದಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಯಡಿಯೂರಪ್ಪ ಮುಂದಿನ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗೋದು ಬಹುತೇಕ ಖಚಿತ.
ಸ್ಪೆಷಲ್ ಡೆಸ್ಕ್ NEWS NEXT ಕನ್ನಡ