ವಾಷಿಂಗ್ಟನ್ : ಕೊರೋನಾ ವೈರಸ್ ಸೋಂಕು ಇಷ್ಟು ದಿನ ಮಕ್ಕಳನ್ನು ಕಾಡೋದಿಲ್ಲಾ ಅಂತಾ ಹೇಳಲಾಗ್ತಿತ್ತು. ಆದ್ರೀಗ ಕೊರೊನಾ ವೈರಸ್ ಸೋಂಕಿನ ದುಷ್ಪರಿಣಾಮ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಅಧಿಕ ಎಂಬ ಸ್ಫೋಟಕ ಮಾಹಿತಿಯೊಂದು ಅಧ್ಯಯನದಿಂದ ಹೊರ ಬಿದಿದ್ದೆ. ಇದರ ಬೆನ್ನಲ್ಲೇ ಮಕ್ಕಳು ಕೊರೊನಾ ಸ್ಪ್ರೆಡ್ಡರ್ ಆಗ್ತಿದ್ದಾರಾ ಅನ್ನುವ ಆತಂಕ ಎದುರಾಗಿದೆ.
ಕೆಂಪುರಾಷ್ಟ್ರ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಕೊರೊನಾ ವೈರಸ್ ಸೋಂಕು ಆರಂಭದಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲಾ ಅಂತಾ ಹೇಳಲಾಗ್ತಿತ್ತು. ಆದ್ರೀಗ ಬಿಡುಗಡೆಯಾಗಿರುವ ವೈಜ್ಞಾನಿಕ ಅಧ್ಯಯನ ವರದಿ ಪೋಷಕರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಕೊರೋನಾ ವೈರಸ್ ಪ್ರಮಾಣ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಅಧಿಕ ಅನ್ನುವ ಮಾಹಿತಿಯನ್ನು ಅಧ್ಯಯನ ಹೊರಗೆಡವಿದೆ.
ಈ ಕುರಿತು ಜಾಮಾ ಪೀಡಿಯಾಟ್ರಿಕ್ಸ್ ಪತ್ರಿಕೆ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ವರದಿಯಲ್ಲಿ ಕೊರೋನಾ ವೈರಸ್ ಸೋಂಕಿನ ದುಷ್ಪರಿಣಾಮ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಅಧಿಕ. ಮಕ್ಕಳಿಂದ ದೊಡ್ಡವರಿಗೂ ಸೋಂಕು ತಗುಲಿ ಅದರಿಂದ ಅವರ ಪ್ರಾಣಕ್ಕೆ ಎರವಾಗುತ್ತದೆ ಎಂದು ಹೇಳಿದೆ.
ಲೂರಿ ಮಕ್ಕಳ ಆಸ್ಪತ್ರೆ ಮತ್ತು ನಾರ್ಥ್ ವೆಸ್ಟರ್ನ್ ವಿಶ್ವವಿದ್ಯಾಲಯದ ಆನ್ ಮತ್ತು ರಾಬರ್ಟ್ ಎಚ್ ಎಂಬ ತಜ್ಞರು ಈ ಬಗ್ಗೆ ಅಧ್ಯಯನ ನಡೆಸಿದ್ದು, ಮಾರ್ಚ್ 23ರಿಂದ ಏಪ್ರಿಲ್ 2ರವರೆಗೆ ಚಿಕಾಗೊ, ಇಲಿನಾಯ್ಸ್ನ ವಿವಿಧ ಆಸ್ಪತ್ರೆಗಳಲ್ಲಿನ ಒಳರೋಗಿ, ಹೊರರೋಗಿ, ತುರ್ತು ವಿಭಾಗ ಮತ್ತು ಡ್ರೈವ್-ಥ್ರೂ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ರೋಗಿಗಳ ದತ್ತಾಂಶ ಸಂಗ್ರಹಿಸಿದ್ದರು.
ಈ ದತ್ತಾಂಶಕ್ಕಾಗಿ 1 ತಿಂಗಳ ಮಗುವಿನಿಂದ 65 ವರ್ಷದ ವೃದ್ಧರು ಸೇರಿದಂತೆ ಒಟ್ಟು 145 ಸೋಂಕಿತರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಸೋಂಕಿತರನ್ನು ಅವರ ವಯಸ್ಸಿನ ಆಧಾರದ ಮೇಲೆ 3 ಗುಂಪುಗಳಾಗಿ ವಿಂಗಡಿಸಿ, 5-17 ವರ್ಷ ವಯಸ್ಸಿನ ಮಕ್ಕಳು ಒಂದು ಗುಂಪು, 18 ರಿಂದ 65 ವರ್ಷ ವಯಸ್ಸಿನ ಸೋಂಕಿತರನ್ನು ಮತ್ತೊಂದು ಗುಂಪಾಗಿ ಪ್ರತ್ಯೇಕಿಸಿ ದತ್ತಾಂಶ ಸಂಗ್ರಹಿಸಲಾಗಿತ್ತು.
ಜಗತ್ತಿಗೆ ಕೊರೋನಾ ವೈರಸ್ ಪರಿಚಯವಾದಾಗ ಮಕ್ಕಳಲ್ಲಿ ಸೋಂಕಿನ ಬಗ್ಗೆ ಹೆಚ್ಚಿನ ದತ್ತಾಂಶ ದೊರೆತಿರಲಿಲ್ಲ. ಆದರೆ ಜಗತ್ತಿಗೆ ಮಾರಕ ಸೋಂಕು ತಗುಲಿದ ಬೆನ್ನಲ್ಲೇ ಜಗತ್ತಿನಾದ್ಯಂತ ಲಕ್ಷಾಂತರ ಮಕ್ಕಳೂ ಕೂಡ ಸೋಂಕಿಗೆ ತುತ್ತಾಗಿರುವ ಕುರಿತು ವರದಿಯಾಗಿದೆ. ಮಕ್ಕಳ ಮುಖಾಂತರ ವೈರಸ್ ಹಿರಿಯರಿಗೆ ಸುಲಭವಾಗಿ ಪ್ರಸರಣವಾಗುವ ಸಾಧ್ಯತೆ ಇದೆ.
ಈ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಸೋಂಕು ಪೀಡಿತ ಹಿರಿಯರಿಗಿಂತ ಮಕ್ಕಳಲ್ಲಿ ವೈರಸ್ ಪ್ರಮಾಣ 100 ಪಟ್ಟು ಅಧಿಕವಾಗಿರುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಕ್ಕಳಲ್ಲಿ ಉಸಿರಾಟ ನಾಳಗಳಲ್ಲಿ ಕೊರೋನಾ ವೈರಸ್ ಪ್ರಮಾಣ ದೊಡ್ಡವರಿಗಿಂತ 100 ಪಟ್ಟು ಹೆಚ್ಚಿರುತ್ತದೆ. ಇದೇ ರೀತಿ ಸೋಂಕಿನ ಪ್ರಮಾಣ ಯುವಕರಲ್ಲೂ ಇರುತ್ತದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿಗೆ ಯುವಕರೂ ಕೂಡ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.
ಕೊರೋನಾ ಸೋಂಕು ಒಕ್ಕರಿಸಿದಾಗ ಉಸಿರಾಟದ ನಾಳಗಳಲ್ಲಿ ಸೇರುವ ವೈರಸ್, ತನ್ಮೂಲಕ ವೈರಲ್ ನ್ಯೂಕ್ಲಿಯಿಕ್ ಆಮ್ಲವನ್ನು ಉತ್ಪತ್ತಿ ಮಾಡಿಕೊಳ್ಳುತ್ತದೆ. ಈ ಆಮ್ಲ ಬೇರೆ ಹೊಸ ವೈರಸ್ ಗಳ ಉತ್ಪತ್ತಿಗೆ ನೆರವಾಗುತ್ತದೆ. ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ ಎಂದು ಅಭಿಪ್ರಾಯಪಡಲಾಗಿದೆ. ಮಕ್ಕಳ ನಡವಳಿಕೆಯನ್ನು ಗಮನಿಸಿ ಆರಂಭಿಕ ದಿನಗಳಲ್ಲಿಯೇ ವೈರಸ್ ಸೋಂಕಿನ ಕುರಿತು ಗ್ರಹಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.