ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಕುಟುಂಬವೊಂದು ವಧು ನೋಡಲು ತೆರಳಿದ್ದರು, ವಧು ನೋಡಿ ಮನೆಗೆ ಮರಳಿದ್ದ ಕುಟುಂಬಕ್ಕೆ ಆಘಾತ ಎದುರಾಗಿದೆ. ಒಂದೇ ಕುಟುಂಬದ 8 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕೊರೊನಾ ಮಹಾಮಾರಿ ಹೇಗೆಲ್ಲಾ ಹರಡುತ್ತೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಜನ ಕೊಂಚ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಹೌದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗಡಿ ಗಿರಿಯಾಪುರ ಹಾಗೂ ದಂದೂರು ಸೇರಿದಂತೆ ಒಂದೇ ಕುಟುಂಬದ ಮೂರು ಹಳ್ಳಿಯ ಸುಮಾರು 20 ಮಂದಿ ಭದ್ರಾವತಿ ಮೂಲದ ವ್ಯಕ್ತಿ ಜೊತೆ ತುಮಕೂರಿಗೆ ವಧುವನ್ನು ನೋಡಲು ಹೋಗಿದ್ದರು. ವಧುವನ್ನು ನೋಡಿ ಹಿಂದಿರುಗುವಾಗ ಹೆಮ್ಮಾರಿ ಕೊರೊನಾ ಜೊತೆ ವಾಪಾಸ್ ಬಂದಿದ್ದಾರೆ.

ವಧು ನೋಡಲು ತೆರಳಿದ್ದರು ಮನೆಗೆ ವಾಪಾಸಾಗುತ್ತಿದ್ದಂತೆಯೇ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲೀಗ ಕುಟುಂಬ ಸದಸ್ಯರ ಗಂಟಲು ದ್ರವದ ಪರೀಕ್ಷೆಗೆ ಒಳಪಡಿಸಿದಾಗ ವಧು ನೋಡಲು ತೆರಳಿದ್ದ 20 ಮಂದಿಯ ಪೈಕಿ 8 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ತುಮಕೂರಿಗೆ ಹೋಗಿ ಬಂದ ಗ್ರಾಮಸ್ಥರಿಗೆ ಸೋಂಕು ತಗುಲಿರುವುದರಿಂದ ಮೂರು ಹಳ್ಳಿಯ ಜನರಲ್ಲಿ ಇದೀಗ ಆತಂಕ ಎದುರಾಗಿದೆ.

ಕಾಫಿನಾಡು ಚಿಕ್ಕಮಗಳೂರಲ್ಲಿ ಆರಂಭದ 55 ದಿನಗಳಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಕಳೆದೊಂದುವರೆ ತಿಂಗಳಿನಿಂದ ಕಾಣಿಸಿಕೊಳ್ಳುತ್ತಿರುವ ಕೊರೊನಾ ವೈರಸ್ ಮಹಾಮಾರಿ ಜಿಲ್ಲೆಯ ಜನರಲ್ಲಿ ಆತಂಕವನ್ನು ತಂದೊಡ್ಡಿದೆ.