ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಿದೆ. ಇಷ್ಟು ದಿನ ವೃದ್ದರನ್ನು ಕಾಡುತ್ತಿದ್ದ ಕೊರೊನಾ ಇದೀಗ ಮಕ್ಕಳನ್ನು ಮಕ್ಕಳನ್ನು ಬೆಂಬಿದಡೆ ಕಾಡುವುದಕ್ಕೆ ಶುರುಮಾಡಿದೆ. ಅದ್ರಲ್ಲೂ ರಾಜ್ಯದಲ್ಲಿ ಬರೋಬ್ಬರಿ 108 ಮಕ್ಕಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು. ಮಕ್ಕಳಲ್ಲಿ ಕೊರೊನಾ ಸೊಂಕು ವ್ಯಾಪಿಸುತ್ತಿರೋದು ಜನರಲ್ಲಿ ಆತಂಕ ಮೂಡಿಸಿದೆ.

ಕೊರೊನಾ ವೈರಸ್ ಸೋಂಕು ಆರಂಭದಲ್ಲಿ ವೃದ್ದರಿಗೆ, ಯುವಕ, ಯುವತಿಯರಿಗಷ್ಟೇ ಕಾಣಿಸಿಕೊಳ್ಳುತ್ತಿತ್ತು. ವಿಶ್ವದಲ್ಲಿಯೇ ಕೊರೊನಾ ಸೋಂಕಿಗೆ ಮಕ್ಕಳು ತುತ್ತಾಗಿರೋ ಪ್ರಮಾಣವೂ ಕಡಿಮೆಯಾಗಿತ್ತು. ಆದ್ರೀಗ ಕೊರೊನಾ ಸೋಂಕು ಮಕ್ಕಳಿಗೂ ವ್ಯಾಪಿಸುತ್ತಿದೆ.

ಅದ್ರಲ್ಲೂ ಕರ್ನಾಟಕ ರಾಜ್ಯದ ನೂರಕ್ಕೂ ಅಧಿಕ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. 15 ವರ್ಷದೊಳಗಿನ ಮಕ್ಕಳಿಗೆ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಇದುವರೆಗೆ 108 ಮಕ್ಕಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬರೋಬ್ಬರಿ 16 ಮಂದಿ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ರೆ, ಬೆಳಗಾವಿಯಲ್ಲಿ 13, ದಾವಣಗೆರೆ 13, ಕಲಬುರಗಿ 13, ಬಾಗಲಕೋಟೆ 10, ಉತ್ತರ ಕನ್ನಡ 8, ವಿಜಯಪುರ 7, ಮಂಡ್ಯ 7, ಹಾಸನ 5, ದಕ್ಷಿಣ ಕನ್ನಡ 3, ಬೀದರ್ 3, ಬಳ್ಳಾರಿಯಲ್ಲಿ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ಬಾಧಿಸಿದ್ದರೆ, ಮೈಸೂರು, ಉಡುಪಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಒಂದೊಂದು ಮಕ್ಕಳಿಗೆ ಡೆಡ್ಲಿ ಕೊರೊನಾ ಮಹಾಮಾರಿ ಇರುವುದು ದೃಢಪಟ್ಟಿದೆ.

ಹೊರ ರಾಜ್ಯಗಳಿಂದ ಬಂದಿರುವ ಮಕ್ಕಳಲ್ಲಿಯೇ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸುತ್ತಿದ್ದು, ಕೊರೊನಾ ಸೋಂಕಿಗೆ ತುತ್ತಾಗಿರುವ ತಂದೆ ತಾಯಿಯಿಂದಲೇ ಮಕ್ಕಳಿಗೆ ಕೊರೊನಾ ಸೋಂಕು ವ್ಯಾಪಿಸಿರುವ ಸಂಖ್ಯೆಯು ಸಾಕಷ್ಟಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ಸಾವಿರ ಪ್ರಕರಣಗಳ ಪೈಕಿ ಶೇ.10ರಷ್ಟು ಮಕ್ಕಳೇ ಮಹಾಮಾರಿಗೆ ತುತ್ತಾಗಿದ್ದಾರೆ. ಹೀಗಾಗಿಯೇ ಆರೋಗ್ಯ ಇಲಾಖೆ 10 ವರ್ಷದೊಳಗಿರುವ ಮಕ್ಕಳನ್ನು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳುವಂತೆ ಸೂಚನೆಯನ್ನು ನೀಡುತ್ತಿದೆ. ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ.