ಪನ್ನಾ: ಯಾರಿಗೆ ಲಕ್ ಯಾವಾಗ ಖುಲಾಯಿಸುತ್ತೆ ಅಂತಾ ಹೇಳೊದಕ್ಕೆ ಸಾಧ್ಯವಿಲ್ಲ. ತುತ್ತಿನ ಅನ್ನಕ್ಕೂ ಕಷ್ಟ ಪಡುತ್ತಿದ್ದ ಗಣಿಯೊಂದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ರಾತ್ರಿ ಬೆಳಗಾಗುವುದರಲ್ಲಿ ಲಕ್ಷಾಧಿಪತಿಯಾಗಿದ್ದಾರೆ. ಅಷ್ಟಕ್ಕೂ ಆತನನ್ನ ಲಕ್ಷಾಧಿಪತಿಯಾಗಿಸಿದ್ದ ಆ ಮೂರು ವಜ್ರಗಳು.
ಹೌದು, ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ಸುಬಾಲ್ ಎಂಬ ಕಾರ್ಮಿಕ ಅಗೆಯುತ್ತಿದ್ದ. ಗಣಿಯಲ್ಲಿ ಅಗೆಯುತ್ತಾ ಅಗೆಯುತ್ತಾ ಮುಂದೆ ಸಾಗುತ್ತಿದ್ದಂತೆಯೇ ಮೂರು ವಜ್ರದ ತುಂಡುಗಳು ಪತ್ತೆಯಾಗಿದ್ದವು. ಅದನ್ನು ನೋಡುತ್ತಿದ್ದಂತೆಯೇ ಕಾರ್ಮಿಕ ಅರೆಕ್ಷಣ ಶಾಕ್ ಆಗಿ ಹೋಗಿದ್ದ.

ಕೂಡಲೇ ಸುಬಾಲ್ ಮೂರು ವಜ್ರದ ತುಂಡುಗಳನ್ನು ವಜ್ರ ಮೌಲ್ಯ ಮಾಪನಾಧಿಕಾರಿ ಆರ್.ಕೆ.ಪಾಂಡೆ ಅವರ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ.

ಈ ವೇಳೆ ಪಾಂಡೆ ಅವರು ಪರಿಶೀಲನೆಯನ್ನು ನಡೆಸಿ ಮೂರು ವಜ್ರದ ತುಂಡುಗಳು ಸುಮಾರು 7.5 ಕ್ಯಾರೆಟ್ ತೂಕವನ್ನು ಹೊಂದಿದ್ದು, ಮೂರು ವಜ್ರದ ಬೆಲೆ ಸುಮಾರು 30 ರಿಂದ 35 ಲಕ್ಷ ರೂಪಾಯಿ ಅಂತಾ ಅಂದಾಜಿಸಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಸುಬಾಲ್ ಗೆ ಸಿಕ್ಕಿರುವ ವಜ್ರದ ಹರಾಜು ಪ್ರಕ್ರಿಯೆ ನಡೆಯುತ್ತದೆ. ನಂತರ 12 ಪರ್ಸಂಟ್ ತೆರಿಗೆ ಕಡಿತ ಮಾಡಿ, ಉಳಿದ 88 ಪರ್ಸಂಟ್ ಸುಬಾಲ್ ಅವರಿಗೆ ಸೇರುತ್ತದೆ. ಇದೇ ಗಣಿಯಲ್ಲಿ ಕಳೆದೊಂದು ತಿಂಗಳ ಹಿಂದೆಯಷ್ಟೇ ಕಾರ್ಮಿಕನೋರ್ವನಿಗೆ 10.69 ಕ್ಯಾರೆಟ್ ತೂಕದ ವಜ್ರ ಸಿಕ್ಕಿತ್ತು.