ನವದೆಹಲಿ : ಭಾರತ ಸ್ವಾತಂತ್ರ್ಯ ಪಡೆದು 72 ವರ್ಷಗಳೇ ಕಳೆದಿದೆ. ಆದರೆ ಆ ಗ್ರಾಮದ ಜನರಿಗೆ ಮಾತ್ರ ಸ್ವಾತಂತ್ರ್ಯೋತ್ಸವ ಕಣ್ತುಂಬಿಕೊಳ್ಳುವ ಭಾಗ್ಯ ಇದುವರೆಗೂ ಬಂದಿಲ್ಲ. ಆದ್ರೆ ಈ ಬಾರಿ ಅಗಸ್ಟ್ 15ರಂದು ಕೆಂಪುಕೋಟೆಯಿಂದ ಮಾಡುವ ಭಾಷಣವನ್ನು ಗ್ರಾಮಸ್ಥರು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ಹೌದು, ಉತ್ತರ ಕಾಶ್ಮೀರದ ನಿಯಂತ್ರಣ ರೇಖೆಯ ಬಳಿಯಲ್ಲಿರುವ ಈ ಕೇರನ್ ಗ್ರಾಮದಲ್ಲಿ ಸುಮಾರು 12,000 ಕುಟುಂಬಗಳಿವೆ. ಆದರೆ ಇಲ್ಲಿನ ಗ್ರಾಮಸ್ಥರು ಇದುವರೆಗೂ ಸ್ವಾತಂತ್ರ್ಯೋತ್ಸವವನ್ನು ಕಣ್ಣಾರೆ ಕಂಡಿದ್ದೆ ಇಲ್ಲಾ. ಅಷ್ಟಕ್ಕೂ ಗ್ರಾಮಸ್ಥರು ಸ್ವಾತಂತ್ರ್ಯದಿಂದ ವಂಚಿತರಾಗೋದಕ್ಕೆ ಕಾರಣವಾಗಿರೋದು ವಿದ್ಯುತ್ ಕೊರತೆ.

ಕೇರನ್ ಗ್ರಾಮದಲ್ಲಿ ಡೀಸೆಲ್ ಜನರೇಟರ್ ಸೆಟ್ ಮೂಲಕ ಸಂಜೆ 6 ರಿಂದ 9 ರವರೆಗೆ ಸಂಜೆ ಮೂರು ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿತ್ತು. ಹೀಗಾಗಿ ಇಲ್ಲಿನ ಜನರು ಹಗಲಿನ ಹೊತ್ತಲ್ಲಿ ವಿದ್ಯುತ್ ಇಲ್ಲದೇ ಬದುಕಬೇಕಾಗಿತ್ತು. ಆದರೆ ಇದೀಗ ಗ್ರಾಮಕ್ಕೆ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ.

ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನದಂದು ಅವರಿಗೆ ಬೆಳಿಗ್ಗೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರಕಲಿದೆ. ಗ್ರಾಮವನ್ನು ತಲುಪುವ ಪವರ್ ಗ್ರಿಡ್ ಅವರಿಗೆ 24 ಗಂಟೆಗಳ ಕಾಲ ವಿದ್ಯುತ್ ಒದಗಿಸುವುದಲ್ಲದೆ ಗ್ರಾಮವನ್ನು ಶಬ್ದ ಹಾಗೂ ಮಾಲಿನ್ಯದಿಂದ ಮುಕ್ತವನ್ನಾಗಿಸಲಿದೆ ಎಂದು ಕುಪ್ವಾರಾ ಜಿಲ್ಲಾಧಿಕಾರಿ ಅನ್ಶುಲ್ ಗರ್ಗ್ ಹೇಳಿದ್ದಾರೆ.

ಕಿಶನ್ ಗಂಗಾ ನದಿಯ ದಂಡೆಯಲ್ಲಿರುವ ಕೇರನ್ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಕುಪ್ವಾರಾ ಜಿಲ್ಲೆ 170 ಕಿ.ಮೀ.ನಷ್ಟು ನಿಯಂತ್ರಣ ರೇಖೆಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ ಮತ್ತು ಒಳನುಸುಳುವಿಕೆ ಮಾರ್ಗಗಳಿಗೆ ಹೆಸರುವಾಸಿಯಾಗಿದೆ.

ಐದು ವಿಧಾನಸಭೆ ಕ್ಷೇತ್ರ ಹಾಗೂ 356 ಪಂಚಾಯಿತಿಗಳನ್ನು ಒಳಗೊಂಡಿದೆ. ಕಠಿಣ ಚಳಿಗಾಲದ ಅವಧಿಯಲ್ಲಿ ಮುಖ್ಯ ಭೂಪ್ರದೇಶದಿಂದ ಸುಮಾರು ಆರು ತಿಂಗಳ ಕಾಲ ಸಂಪರ್ಕದಿಂದ ದೂರವಾಗುತ್ತದೆ. ಗ್ರಾಮದಲ್ಲಿ ಇದೀಗ ವಿದ್ಯುತ್ ಮಾತ್ರವಲ್ಲ ರಸ್ತೆಗಳನ್ನು ಅಭಿವೃದ್ದಿ ಪಡಿಸಲು ಸ್ಥಳೀಯಾಡಳಿತ ಮುಂದಾಗಿದೆ.