ಬೆಂಗಳೂರು : ಇಷ್ಟು ದಿನ ಜ್ವರ, ಶೀತ, ಕೆಮ್ಮ ಕೊರೊನಾದ ಲಕ್ಷಣಗಳು ಎಂದು ಹೇಳಲಾಗುತ್ತಿತ್ತು. ಆದ್ರೀಗ ಜ್ವರ ಮಾತ್ರವಲ್ಲ ಬಿಕ್ಕಳಿಕೆ ಬಂದರೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು !

ಹೌದು, ಬೆಂಗಳೂರಿನ ಜಯದೇವ ಹೃದಯ ವಿಜ್ಞಾನ ಸಂಸ್ಥೆ ಈ ಕುರಿತು ಅಧ್ಯಯನವೊಂದನ್ನು ನಡೆಸಿದ್ದು, ಸಂಶೋಧನೆಯಲ್ಲಿ ಬಿಕ್ಕಳಿಕೆಯೂ ಕೂಡ ಕೊರೊನಾ ಸೋಂಕಿನ ಲಕ್ಷಣವೆಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಕೇವಲ ದೇಹದ ಉಷ್ಣಾಂಶ ತಪಾಸಣೆ ನಡೆಸಿದ್ರೆ ಪ್ರಯೋಜನವಿಲ್ಲ ಎನ್ನುತ್ತಿದ್ದಾರೆ ಅಧ್ಯಯನಕಾರರು.
ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ಸುಮಾರು 200 ರೋಗಿಗಳ ಮೇಲೆ ಜಯದೇವ ಹೃದಯ ವಿಜ್ಞಾನ ಸಂಸ್ಥೆಯ ತಜ್ಞರು ಅಧ್ಯಯನವನ್ನು ನಡೆಸಿದ್ದರು. ಈ ವೇಳೆಯಲ್ಲಿ ಶೇ. 20ರಿಂದ 25 ರಷ್ಟು ಮಂದಿಗೆ ಮಾತ್ರವೇ ಜ್ವರ ಕಾಣಿಸಿಕೊಂಡಿತ್ತು. ಶೇ.75ರಷ್ಟು ಮಂದಿಗೆ ಮೈಕೈ ನೋವು, ತಲೆನೋವು, ಬಾಯಿಗೆ ರುಚಿಯಿಲ್ಲದಿರುವುದು ಸೇರಿದಂತೆ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಸಾಮಾನ್ಯವಾಗಿ ಜ್ವರ, ಶೀತ, ಉಸಿರಾಟದ ಸಮಸ್ಯೆಯಿದ್ರೆ ಮಾತ್ರ ಕೋವಿಡ್ -19 ಪರೀಕ್ಷೆ ಮಾಡಿಸಲಾಗುತ್ತದೆ. ಆದ್ರೆ ಕೊರೊನಾ ಹೆಮ್ಮಾರಿ ದಿನಕ್ಕೊಂದು ರೋಗ ಲಕ್ಷಣ ಬಯಲಾಗುತ್ತಿದೆ. ಇದೀಗ ಪದೇ ಪದೇ ಬಿಕ್ಕಳಿಕೆ ಬರುವುದು ಕೂಡ ಕೊರೊನಾದ ಲಕ್ಷಣ ಅಂತ ಅಧ್ಯಯನಕಾರರು ತಿಳಿಸಿದ್ದಾರೆ. ಆದರೆ ಬಿಕ್ಕಳಿಗೆ ಕೊರೊನಾ ಲಕ್ಷಣ ಎಂದು ಎಲ್ಲಿಯೂ ನಮೂದಾಗಿಲ್ಲ. ಹೀಗಾಗಿ ಪದೇ ಪದೇ ಬಿಕ್ಕಳಿಗೆ ಬಂದ್ರೆ ತಪ್ಪದೇ ಕೊರೊನಾ ತಪಾಸಣೆ ಮಾಡಿಸಲೇ ಬೇಕು.


ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಮಾಲ್ಗಳು, ಅಪಾರ್ಟ್ ಮೆಂಟ್ಗಳು, ಸರ್ಕಾರ ಹಾಗೂ ಖಾಸಗಿ ಕಚೇರಿಗಳು ಸೇರಿ ಎಲ್ಲ ರೀತಿಯ ಕೆಲಸದ ಸ್ಥಳಗಳು ಎಲ್ಲೆಡೆ ಆರಂಭದಿಂದಲೂ ಕೇವಲ ದೇಹದ ಉಷ್ಣಾಂಶವನ್ನು ಅವಲಂಬಿಸಿಯೇ ಕೋವಿಡ್ ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಸೋಂಕು ಪತ್ತೆ ಸಾಧ್ಯವಾಗುತ್ತಿಲ್ಲ.

ಯಾವುದೇ ಒಂದು ಆರೋಗ್ಯ ಸಮಸ್ಯೆಗೆ ಒಂದೇ ರೀತಿಯ ಲಕ್ಷಣಗಳಿರು ವುದಿಲ್ಲ. ಹಲವು ಬಗೆಯ ಲಕ್ಷಣಗಳಿರುತ್ತವೆ. ಹೀಗಾಗಿ ರೋಗ ಪತ್ತೆಗೆ ನಾನಾ ರೀತಿಯ ಪರೀಕ್ಷೆ ನಡೆಸಬೇಕಾಗುತ್ತದೆ ಎನ್ನುತ್ತಾರೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್.

ಜ್ವರ, ಶೀತ ಇಲ್ಲಾ ನನಗೆ ಕೊರೊನಾ ಸೋಂಕಿಲ್ಲ ಅಂತಾ ಮನೆಯಲ್ಲಿಯೇ ಉಳಿದುಕೊಳ್ಳುವವರು ಇನ್ನು ಎಚ್ಚರವಾಗಿರಬೇಕು. ಏನೇ ಆಗಲಿ ಪದೇ ಪದೇ ಬಿಕ್ಕಳಿಗೆ ಬರ್ತಿದ್ರೆ ಯಾವುದಕ್ಕೂ ಒಮ್ಮೆ ಕೊರೊನಾ ತಪಾಸಣೆಯನ್ನು ಮಾಡಿಸೋದನ್ನು ಮರೆಯಬೇಡಿ.