ಭಾನುವಾರ, ಏಪ್ರಿಲ್ 27, 2025
HomeCorona Updatesಸಾಮಾಜಿಕ ಅಂತರದಂತೆ ಹಸಿವು ಮುಕ್ತವಾಗುತ್ತಾ ಭಾರತ ?

ಸಾಮಾಜಿಕ ಅಂತರದಂತೆ ಹಸಿವು ಮುಕ್ತವಾಗುತ್ತಾ ಭಾರತ ?

- Advertisement -
  • ರೇಷ್ಮಾ ಉಳ್ಳಾಲ್ (ಹಿರಿಯ ಪತ್ರಕರ್ತರು)

ಜಗತ್ತೇ ಡೆಡ್ಲಿ ಕೊರೊನಕ್ಕೆ ತತ್ತರಿಸಿದೆ. ಆರ್ಥಿಕತೆಯ ಬಲದಿಂದ ಸಣ್ಣ ರಾಷ್ಟ್ರಗಳಿಗೆ ನಡುಕ ಹುಟ್ಟಿಸುತ್ತಿದ್ದ ದೇಶಗಳೆಲ್ಲಾ ತಮ್ಮ ಅಸ್ತಿತ್ವಕ್ಕಾಗಿ ಹಪಹಪಿಸುತ್ತಿವೆ. ಕೊರೊನಾ ಎಂಬ ಸೂಕ್ಷ್ಮಾತೀ ಸೂಕ್ಷ್ಮ ವೈರಸ್ ನಿರ್ಮೂಲನಕ್ಕೆ ಜಗತ್ತಿನಾದ್ಯಂತ ವಿಜ್ಞಾನಿಗಳ ಸಮೂಹ ಸಮರೋಪಾದಿಯಲ್ಲಿ ತೊಡಗಿವೆ. ಒಂದು ಕಡೆ ಕೊರೊನಾದಿಂದ ಸಾವಿರ ಸಾವಿರ ಹೆಣಗಳು ಉರುಳುತ್ತಿದ್ದರೆ, ಇನ್ನೊಂದು ಕಡೆ ಮಾರಣಾಂತಿಕ ಹಸಿವು ಅದೆಷ್ಟೋ ಜೀವಗಳನ್ನು ಬಲಿತೆಗೆದುಕೊಂಡಿವೆ.

ಕೊರೊನಾ ವೈರಸ್‌ನ್ನು ತಡೆಗಟ್ಟಲು ಲಾಕ್‌ಡೌನ್‌ಗೆ ಮೊರೆಹೋಗದೆ ಬೇರೆ ವಿಧಿಯಿಲ್ಲ ಅನ್ನೊದೇನೋ ನಿಜ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅದು ಸುರಕ್ಷಿತವೂ ಹೌದು. ಆದರೆ, ರೈತರು, ಬಡಕಾರ್ಮಿಕರು, ರೋಗಿಗಳು, ಮುದುಕರು ಇದರಿಂದ ಪರದಾಡಿದೆಷ್ಟು? ಎಪ್ರಿಲ್ ೧೪ರ ನಂತರ ಸ್ವಲ್ಪ ಸುಧಾರಿಸಿಕೊಳ್ಳುತ್ತೇವೆ ಅಂದುಕೊಂಡವರಿಗೆ ಮತ್ತೆ ಎರಡು ವಾರಗಳ ಲಾಕ್‌ಡೌನ್ ಆತಂಕ ಹುಟ್ಟಿಸಿದೆ. ಇವತ್ತಷ್ಟೇ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡಾನ್ ಅವಧಿಯನ್ನು ಮೇ ೩ರವರೆಗೆ ವಿಸ್ತರಿಸಿದ್ದಾರೆ.

ಎಷ್ಟೋ ಸಂಘ ಸಂಸ್ಥೆಗಳು ಬಡವರಿಗಾಗಿ ಸಹಾಯ ಹಸ್ತ ಚಾಚಿವೆ. ಪ್ರಧಾನಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಬಾಲವೃದ್ಧರಾದಿಯಾಗಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಸರಕಾರ ವಿವಿಧ ಯೋಜನೆಗಳ ಮೂಲಕ ಬಡವರಿಗೆ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದೆ. ಇಷ್ಟೆಲ್ಲಾ ಆದರೂ ಅದು ಎಲ್ಲಾ ಬಡವರನ್ನು ತಲುಪಿಲ್ಲ ಅನ್ನೋದು ಮಾತ್ರ ಅಷ್ಟೇ ಸತ್ಯ. ಪ್ರತೀ ಕ್ಷಣವೂ ಆತಂಕದಿಂದ, ಹಸಿವಿನಿಂದ ದಿನ ದೂಡುವ ಮಂದಿಗೆ ಕೊರೋನಕ್ಕಿಂತ ಬಡತನವೇ ಶಾಪವಾಗಿದೆ. ಕೊರೋನಾದಿಂದ ಸತ್ತವರ ಸುದ್ದಿಯ ಮುಂದೆ ಹಸಿವಿನಿಂದ ಸತ್ತವರ ಅಂಕಿಅಂಶಗಳು ಗೌಣವಾದವು.

ಯಾವ ದೇಶಗಳು ಹೊಟ್ಟೆಗಿಲ್ಲದೆ ಸತ್ತವರ ಸಂಖ್ಯೆಯನ್ನು ಬಹಿರಂಗಪಡಿಸುತ್ತಿಲ್ಲ. ಮಾಧ್ಯಮಗಳೂ ಇದರ ವಿರುದ್ಧ ದ್ವನಿ ಎತ್ತುತ್ತಿಲ್ಲ. ಇವಿಷ್ಟು ಬಡವರ ಪಾಡಾದರೆ, ಮಧ್ಯಮ ವರ್ಗದ ಜನರ ಸ್ಥಿತಿ ಇವರಿಕ್ಕಿಂತ ಭಿನ್ನವೇನೂ ಇಲ್ಲ. ಉದ್ಯೋಗವಿದ್ದರೂ ಸಮಯಕ್ಕೆ ಸರಿಯಾಗಿ ಸಂಬಳ ಬರುತ್ತದೆ ಅನ್ನುವ ಖಾತ್ರಿಯಿಲ್ಲ. ಸಾಧ್ಯವಾದಷ್ಟು ಅಗತ್ಯ ಸಾಮಗ್ರಿಗಳನ್ನು ಕೊಂಡುಕೊಳ್ಳಬೇಕೆಂದರೂ ಬೆಲೆಗಳು ಗಗನಕ್ಕೇರಿವೆ. ಎಷ್ಟೇ ಬೆಲೆ ತೆತ್ತಾದರೂ ಖರೀದಿ ಮಾಡುತ್ತೇವೆ ಅನ್ನುವವರಿಗೂ ಅಗತ್ಯಕ್ಕೆ ಬೇಕಾದಷ್ಟು ಸಾಮಗ್ರಿಗಳು ಲಭ್ಯವಾಗುತ್ತಿಲ್ಲ. ಇನ್ನೊಂದು ಕಡೆ ರೈತರು ಇಡೀ ವರ್ಷ ಬೆಳೆದ ಬೆಳೆಯನ್ನು ಕೊಳ್ಳುವವರಿಲ್ಲದೆ ಬೀದಿಗೆಸೆಯುತ್ತಿದ್ದಾರೆ. ಒಂದು ಕಡೆ ಆಹಾರವಿಲ್ಲದೆ ಒದ್ದಾಡುವ ಜನ, ಇನ್ನೊಂದು ಕಡೆ ತಾವೇ ಬೆಳೆದ ಆಹಾರಗಳನ್ನು ತಮ್ಮ ಕೈಯಿಂದ ಹಾಳುಗೆಡಹುವ ಪರಿಸ್ಥಿತಿಗೆ ಕಣ್ಣೀರು ಹಾಕುವ ರೈತರು.

ಕೃತಕ ದರ ಏರಿಕೆಯಲ್ಲಿ ಮಧ್ಯವರ್ತಿಗಳು ಹಾಗೂ ಅಂಗಡಿ ಮಾಲೀಕರ ಕೈವಾಡವಿದೆ ಎಂಬುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ವಿಚಾರವನ್ನು ರೈತ ಸಂಘಟನೆಗಳು ಸರಕಾರದ ಗಮನಕ್ಕೂ ತಂದಿವೆ. ತರಕಾರಿ ಹಾಗೂ ದಿನಸಿ ಅಂಗಡಿಗಳಲ್ಲಿ ಕಡ್ಡಾಯವಾಗಿ ದರಪಟ್ಟಿಯನ್ನು ಅಳವಡಿಸುವಂತೆ ಅವರಿಗೆ ಸೂಚಿಸಲು ಅಂಗಲಾಚಿವೆ. ಅದರೆ, ಅದು ಜಾರಿಯಾಗಲೇ ಇಲ್ಲ. ಮನೆಯಲ್ಲಿಯೇ ಸುರಕ್ಷಿತವಾಗಿರಿ ಎನ್ನುವ ಸರಕಾರ ಕೃತಕ ಬೆಲೆಯೇರಿಕೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳದಿರುವುದರಿಂದ ಇಂದು ಆಹಾರದ ಅಭಾವ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಸರಕಾರವೇ ರೈತರ ಬೆಳೆಗಳನ್ನು ನೇರವಾಗಿ ಖರೀದಿ ಮಾಡಿ ದರ ನಮೂದಿಸಿ ಗ್ರಾಹಕರ ಬಳಿ ತಲುಪಿಸಿದರೆ ಮಾತ್ರವೇ ಕೃತಕ ಆಹಾರ ಅಭಾವವನ್ನು ನೀಗಿಸಬೇಕು. ಇದರಿಂದ ಲಾಕ್‌ಡಾನ್ ಸಡಿಲಿಕೆ ಸಂದರ್ಭದಲ್ಲಿ ಜನರ ನೂಕು ನುಗ್ಗಲಾಗಲಿ, ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ತಮಗೆ ಬೇಕಾದ ಆಹಾರ ಪದಾರ್ಥಗಳು ಸಿಗದೆ ಮರಳಿ ಯತ್ನವ ಮಾಡುವ ಪ್ರಮೇಯವೂ ಇರುವುದಿಲ್ಲ. ಕೊರೊನಾ ನಿಗ್ರಹಕ್ಕೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಎಷ್ಟು ಮುಖ್ಯವೋ ಪ್ರಜೆಗಳನ್ನು ಹಸಿವು ಮುಕ್ತಗೊಳಿಸುವುದು ಕೂಡಾ ಅಷ್ಟೇ ಮುಖ್ಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular