ವಾರಣಾಸಿ: ಕೆಲವೊಮ್ಮೆ ಮದುವೆ ಅನ್ನೋದು ಎಂತೆಂಥ ಅವಾಂತರಗಳನ್ನು ಸೃಷ್ಟಿಸುತ್ತೇ ಹೇಳೋಕೆ ಸಾಧ್ಯವಿಲ್ಲ. ದಲ್ಲಾಳಿ ಮೂಲಕ ನಿಶ್ಚಯ ವಾದ ಎರಡನೇ ಮದುವೆಯಲ್ಲಿ ವಧುವಿನ ಮನೆ ಸಿಗದೇ ವರನೇ ಕಂಗಾಲಾದ ಘಟನೆ ವಾರಣಾಸಿಯಲ್ಲಿ ನಡೆದಿದ್ದು, ಕೊನೆಗೆ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ.
ಉತ್ತರ ಪ್ರದೇಶದ ಅಜಂಗಡ ಜಿಲ್ಲೆಯ ಕೊತ್ವಾಲಿ ಗ್ರಾಮದ ಕಾನ್ಸಿರಾಮ್ ಕಾಲೋನಿಯ ಯುವಕನೊಬ್ಬ ಎರಡನೇ ಮದುವೆಗೆ ಹೆಣ್ಣು ಹುಡುಕುತ್ತಿದ್ದ. ಈ ವೇಳೆ ಅಂಗಡಿಯೊಂದರಲ್ಲಿ ಪರಿಚಯವಾದ ಮಹಿಳೆ ಮದುವೆ ಬ್ರೋಕರ್ ಎಂಬ ಹೆಸರಿನಲ್ಲಿ ಈತನೊಂದಿಗೆ ವ್ಯವಹಾರ ನಡೆಸಿದ್ದು, ಮದುವೆ ನಿಶ್ಚಯಿಸಿದ್ದಾಳೆ.
ವಧುವನ್ನು ತೋರಿಸದೇ, ವಧುವಿನ ಮನೆಯ ವಿಳಾಸವನ್ನು ನೀಡದೇ ಚಾಲಾಕಿತನ ಮೆರೆದ ದಲ್ಲಾಳಿ ಹೆಂಗಸು ಮದುವೆಯ ಅಡ್ವಾನ್ಸ್ ಎಂದು ವರನ ಕೈಯಿಂದ ವಧುವಿನ ಮನೆಯವರಿಗೆ 20 ಸಾವಿರ ರೂಪಾಯಿ ಕೊಡಿಸಿದ್ದಾಳೆ.
ದಲ್ಲಾಳಿ ನಿಗದಿ ಪಡಿಸಿದಂತೆ ವರ ಮದುವೆಯ ಮೆರವಣಿಗೆ ಜೊತೆ ಮಾವು ಜಿಲ್ಲೆಯ ಮಾಣಿಪುರದಲ್ಲಿನ ಹುಡುಗಿಮನೆಗೆ ಹೊರಟಿದ್ದಾನೆ.
ಆದರೆ ಇಡಿ ರಾತ್ರಿ ಹುಡುಕಾಡಿದ್ರೂ ಮದುವೆಗೆ ಹೊರಟವರಿಗೆ ಮಧುಮಗಳ ಮನೆಯೇ ಸಿಗಲಿಲ್ಲ. ಸಿಟ್ಟಿಗೆದ್ದ ವರನ ಮನೆಯವರು ಮದುವೆಯ ದಲ್ಲಾಳಿಯನ್ನು ಹುಡುಕಿ ಒತ್ತಾಯಾಳಾಗಿ ಇಟ್ಟುಕೊಂಡಿದ್ದಾರೆ.
ಕೊನೆಗೆ ಸ್ಥಳೀಯ ಪೊಲೀಸರ ಮಧ್ಯ ಪ್ರವೇಶದಿಂದ ಒತ್ತಾಯಾಳಾಗಿದ್ದ ದಲ್ಲಾಳಿ ಯನ್ನು ರಕ್ಷಿಸಲಾಗಿದ್ದು, ವರನು ಮದುವೆಯೂ ಇಲ್ಲದೇ, ದುಡ್ಡು ವಾಪಸ ಸಿಗದೇ ಕಂಗಾಲಾಗಿದ್ದಾನೆ.