ಸೋಮವಾರ, ಏಪ್ರಿಲ್ 28, 2025
Homeಮಿಸ್ ಮಾಡಬೇಡಿಇಂದು ವಿಶ್ವ ಸ್ನೇಹಿತರ ದಿನ : ಸ್ನೇಹಿತರ ದಿನಾಚರಣೆ ಹುಟ್ಟಿದ್ದು ಎಲ್ಲಿ ಗೊತ್ತಾ ?

ಇಂದು ವಿಶ್ವ ಸ್ನೇಹಿತರ ದಿನ : ಸ್ನೇಹಿತರ ದಿನಾಚರಣೆ ಹುಟ್ಟಿದ್ದು ಎಲ್ಲಿ ಗೊತ್ತಾ ?

- Advertisement -
  • ಹೇಮಂತ್ ಚಿನ್ನು

ಅಪರಿಚಿತರು ಪರಿಚಿತರಾಗಿ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸುಂದರ ಬಂಧವೇ ಸ್ನೇಹ. ಸ್ನೇಹಕ್ಕೆ ಯಾವುದೇ ವಯಸ್ಸಿನ, ಜಾತಿಯ, ಧರ್ಮದ ಮಿತಿಯಿಲ್ಲ. ಪರಸ್ಪರ ಅಕ್ಕರೆಯನ್ನು ತೋರುತ್ತಾ ಕೈಲಾದ ನಿಸ್ವಾರ್ಥ ಸಹಾಯ ಮಾಡುವ ಬಂಧ. ಸ್ನೇಹವನ್ನು ಅಂತರ್ವ್ಯಕ್ತೀಯ ಬಂಧದ ರೂಪ ಎಂದು ಸಹ ಹೇಳಬಹುದು. ರಕ್ತ ಸಂಬಂಧವಲ್ಲದೆ ಇದ್ದರೂ ರಕ್ತ ಸಂಬಂಧಕ್ಕೂ ಮೀರಿದ ರೀತಿಯಲ್ಲಿರುತ್ತದೆ. ಕಷ್ಟಕಾಲದಲ್ಲಿ ಯಾರೂ ಬರದೇ ಹೋದರೂ ಸ್ನೇಹಿತ ಎನಿಸಿಕೊಂಡವರು ಬಂದೇ ಬರುತ್ತಾರೆ.

ಸ್ನೇಹ ಸ್ಥಳದಿಂದ ಸ್ಥಳಕ್ಕೆ ಹಲವು ರೂಪಗಳಲ್ಲಿ ಬದಲಾಗಬಹುದು. ಸ್ನೇಹ, ಕೆಲವು ಗುಣಲಕ್ಷಣಗಳನ್ನು ಹೊಂದಿದೆ. ಅಂತಹ ಗುಣಲಕ್ಷಣಗಳನ್ನು ಪ್ರೀತಿ, ಸಹಾನುಭೂತಿ, ಅನುಭೂತಿ, ಪ್ರಾಮಾಣಿಕತೆ, ಪರೋಪಕಾರ ಬುದ್ಧಿ, ಪರಸ್ಪರ ಸಾಮರಸ್ಯ, ಪರಸ್ಪರರ ಕಂಪನಿ, ಸಂತೋಷಕ್ಕಾಗಿ, ನಂಬಿಕೆ ಮತ್ತು, ತನ್ನನ್ನೇ ಎಂದು ಒಬ್ಬರ ಭಾವನೆಗಳನ್ನು ವ್ಯಕ್ತಪಡಿಸಲು, ಮತ್ತು ಸ್ನೇಹಿತರ ತೀರ್ಪು ಭಯವಿಲ್ಲದೇ ತಪ್ಪುಗಳನ್ನು ತಿದ್ದುವ ಸಾಮರ್ಥ್ಯ ಸ್ನೇಹಕ್ಕೆ ಇದೆ.

ಸ್ನೇಹ ಎಂಬುದು ಬಾಂಧವ್ಯ ಅಥವಾ ಹೊಂದಾಣಿಕೆಯ ಪ್ರಜ್ಞೆಯನ್ನು ರೂಪಿಸಿ ಜೀವನದ ಉದ್ದೇಶಕ್ಕೊಂದು ಅರ್ಥಕೊಡುವ ಸಾಧನ. ಪ್ರತಿಕೂಲ ಸನ್ನಿವೇಶಗಳು ಹಾಗೂ ಮಾನಸಿಕ ಆಘಾತಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸ್ನೇಹಕ್ಕೆ ಮಹತ್ವದ ಸ್ಥಾನವಿದೆ. ಇದು ಆತ್ಮವಿಶ್ವಾಸವನ್ನು ಗಳಿಸಿ ಗಟ್ಟಿಮಾಡಿಕೊಳ್ಳುವುದಕ್ಕೂ ಸಹಕಾರಿ, ಜೀವನದ ಆನಂದವನ್ನು ವರ್ಧಿಸುವ ಮಂತ್ರದಂಡ.

ಸಮಸ್ಯೆಗಳು ತಲೆದೋರಿದಾಗ ಅದನ್ನು ಹಂಚಿಕೊಳ್ಳುವುದು ಮತ್ತು ಸಲಹೆ ಕೇಳುವುದು ಸ್ನೇಹಿತರ ಬಳಿಯೇ ಸರಾಗವೇ ಹೊರತು, ಮಿಕ್ಕವರ ಬಳಿ ಅಷ್ಟಾಗಿ ಅಲ್ಲ ಎಂಬುದು ಅನುಭವಜನ್ಯ ಮಾತು. ಸ್ನೇಹಿತರು ಯಾವಾಗಲೂ ಅತೀವ ಪ್ರಭಾವ ಬೀರುವಂಥವರಾಗಿರುವುದರಿಂದ, ವ್ಯಕ್ತಿಯೋರ್ವನ ಜೀವನ ಕೌಶಲಗಳ ಸುಧಾರಣೆಯಲ್ಲಿ ಸ್ನೇಹದ ಕೊಡುಗೆ ಹೆಚ್ಚೇ ಎನ್ನಬೇಕು. ಜಾತಿ-ಮತ, ಭಾಷೆ-ಬಣ್ಣ, ಸಾಮಾಜಿಕ ಸ್ಥಾನಮಾನ, ಶ್ರೀಮಂತಿಕೆ, ಸಾಧನೆಗಳು- ಈ ಯಾವುದೇ ಸಂಗತಿಗಳಿಗೂ ಮಿಗಿಲಾದದ್ದು ಸ್ನೇಹ.

ವ್ಯಕ್ತಿಯೊಬ್ಬ ಮೌನವಾಗಿದ್ದಾಗಲೂ ಅವನ ಅಳಲು-ಸಂಕಟವನ್ನು ಕೇಳಿಸಿಕೊಳ್ಳಬಲ್ಲಾತನೇ ನಿಜ ಸ್ನೇಹಿತ. ತನ್ನ ಆತ್ಮೀಯ ಸ್ನೇಹಿತ ಅಥವಾ ಸ್ನೇಹಿತರಿಗಾಗಿ ಸಾಕಷ್ಟು ಸಹಾಯ, ಸಾಹಸ ಹಾಗೂ ಸತ್ಸಂಗತಿಗಳನ್ನು ಒಳಗೊಂಡಂತಹ ಸ್ನೇಹದ ಕಥೆಯನ್ನು ಪುರಾಣ ಇತಿಹಾಸಗಳಲ್ಲಿಯೂ ಕಾಣಬಹುದು. ಪ್ರಸ್ತುತ ಜೀವನದಲ್ಲೂ ಉದ್ಯೋಗ, ಸಾಮಾಜಿಕ ಕೆಲಸ, ವಿದ್ಯಾಭ್ಯಾಸ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಜನರು ಪರಸ್ಪರ ಸ್ನೇಹ-ಸಹಕಾರಗಳ ಮೂಲಕ ಕೆಲಸ ನಿರ್ವಹಿಸುವುದನ್ನು ಕಾಣಬಹುದು. ಕೆಲವರು ಆತ್ಮೀಯರಾಗಿ ಮಾನಸಿಕ ಸ್ಥೈರ್ಯವನ್ನು ತುಂಬುವರು. ನಿಜ, ಅಗತ್ಯ ಇರುವಾಗ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ. ಅಂತಹ ಸ್ನೇಹಿತರನ್ನು ನಾವು ನಮ್ಮ ಜೀವನದಲ್ಲಿ ಪಡೆದುಕೊಂಡಿದ್ದೇವೆ ಎಂದರೆ ಅದು ನಮ್ಮ ಅದೃಷ್ಟ ಹಾಗೂ ಪುಣ್ಯ ಎನಿಸಿಕೊಳ್ಳುತ್ತದೆ. ಅಂತಹ ಸುಂದರ ಸಂಬಂಧಗಳನ್ನು ನೆನೆದುಕೊಳ್ಳಲು ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ನೇಹಿತರ ದಿನಾಚರಣೆಯನ್ನು ಆಚರಿಸುತ್ತೇವೆ.

ಸ್ನೇಹಿತನು ಜೀವನದಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸುತ್ತಾನೆ. ಅಂತಹ ಒಂದು ಸುಂದರ ಬಂಧಕ್ಕೆ ಸ್ನೇಹ ದಿನ ಎಂಬ ವಿಶೇಷ ಆಚರಣೆಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್, 1935 ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು. ಅಂದಿನಿಂದ ಸ್ನೇಹ ದಿನವು ವಾರ್ಷಿಕ ಕಾರ್ಯಕ್ರಮವಾಯಿತು. ಸ್ನೇಹ ದಿನವನ್ನು ಆಚರಿಸುವ ಯಶಸ್ಸು ಮತ್ತು ಜನಪ್ರಿಯತೆಯನ್ನು ನೋಡಿದ ನಂತರ ಹಲವಾರು ಇತರ ದೇಶಗಳು ಸಹ ಆಚರಿಸಲು ಪ್ರಾರಂಭಿಸಿದವು. ನಂತರದ ದಿನಗಳಲ್ಲಿ ಸ್ನೇಹ ದಿನವು ಜನಪ್ರಿಯವಾಯಿತು. 1997 ರಲ್ಲಿ ವಿಶ್ವಸಂಸ್ಥೆಯು ವಿನ್ನಿ-ದಿ ಪೂಹ್ ಅವರನ್ನು ವಿಶ್ವದ ಸ್ನೇಹಕ್ಕಾಗಿ ರಾಯಭಾರಿಯಾಗಿ ಹೆಸರಿಸಿದೆ ಎಂದು ಘೋಷಿಸಿತು.

ಇದನ್ನೂ ಓದಿ : ಸಖತ್‌ ವೈರಲ್‌ ಆಯ್ತು ವೃದ್ದದಂಪತಿಗಳ ಪೋಟೋ ಶೂಟ್‌

2011 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯದ ಪ್ರಕಾರ ಜನಾಂಗ, ಬಣ್ಣ, ಲಿಂಗ, ಧರ್ಮ ಇತ್ಯಾದಿಗಳನ್ನು ಲೆಕ್ಕಿಸದೆ ವಿವಿಧ ದೇಶಗಳ ಜನರ ಸ್ನೇಹಕ್ಕಾಗಿ ಬಲವಾದ ಸಂಬಂಧ ವನ್ನು ರೂಪಿಸುವ ಉದ್ದೇಶದಿಂದ ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹ ದಿನವಾಗಿ ಆಚರಿಸಲು ನಿರ್ಧರಿಸಿತು. ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ.

1958ರ ಜುಲೈ 20ರಂದು ಡಾ. ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂಬ ಪ್ರಸ್ತಾಪವನ್ನಿಟ್ಟರು. ಪರಾಗ್ವೆಯ ಅಸುನಸಿಯೊನ್ ನಿಂದ 200 ಕಿ.ಮೀ. ಉತ್ತರದಲ್ಲಿರುವ ಪರಾಗ್ವೆ ನದಿಯ ನಗರದವಾದ ಪುರ್ಟೊ ಪಿನಾಸ್ಕೋದಲ್ಲಿ ತನ್ನ ಸ್ನೇಹಿತರೊಂದಿಗೆ ರಾತ್ರಿಯೂಟವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಾಚೋ ಅವರು ಈ ಪ್ರಸ್ತಾವವನ್ನಿಟ್ಟಿದ್ದರು. 2011 ಎಪ್ರಿಲ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 30ನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಅಚರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.

ದಕ್ಷಿಣ ಅಮೆರಿಕಾದ ದಕ್ಷಿಣಭಾಗದ ಕೆಲವೊಂದು ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪರಾಗ್ವೆಯಲ್ಲಿ ಇದನ್ನು ಆಚರಿಸಲಾಗುತ್ತದೆ. 1958ರಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಆಚರಿಸಲು ಪರಾಗ್ವೆ ಪ್ರಸ್ತಾವ ಮಾಡಿತ್ತು. ಸಾಂಪ್ರದಾಯಿಕವಾಗಿ ಆಗಸ್ಟ್ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಕೆಲವೊಂದು ರಾಷ್ಟ್ರಗಳಲ್ಲಿ ಸ್ನೇಹಿತರ ದಿನ ಆಚರಣೆಗೆ ಯಾವುದೇ ನಿಗದಿತ ದಿನವಿಲ್ಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular