ಹೈದ್ರಾಬಾದ್ : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಆಂಧ್ರಪ್ರದೇಶ ಸರಕಾರ ಶಾಲೆಗಳನ್ನು ಪುನರಾರಂಭ ಮಾಡಿದೆ. ಆದರೆ ಶಾಲಾರಂಭವಾದ ಎರಡೇ ಎರಡು ದಿನಗಳಲ್ಲಿ ಸರಕಾರಕ್ಕೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಡುಗೆ ಸಹಾಯಕರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ನವೆಂಬರ್ 2ರಂದು ಆಂಧ್ರಪ್ರದೇಶದಲ್ಲಿ 9 ಮತ್ತು 10ನೇ ತರಗತಿಗಳನ್ನು ಆರಂಭಿಸಲಾಗಿದೆ. ಶಾಲಾರಂಭದ ಹಿನ್ನೆಲೆಯಲ್ಲಿ ನವೆಂಬರ್ 2ರಂದು ಸುಮಾರು 2,500 ಶಿಕ್ಷಕರಿಗೆ ಕೊರೊನಾ ರಾಪಿಡ್ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆಯಲ್ಲಿ ಚಿತ್ತೂರು ಹಾಗೂ ನೆಲ್ಲೂರು ಜಿಲ್ಲೆಯ ವಿವಿಧ ಶಾಲೆಗಳಲ್ಲಿನ 57 ಶಿಕ್ಷಕರು, 6 ಮಂದಿ ವಿದ್ಯಾರ್ಥಿಗಳು, ವಾಚ್ ಮೆನ್ ಹಾಗೂ ಅಡುಗೆ ಸಹಾಯಕರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲೀಗ ಆತಂಕ ಶುರುವಾಗಿದೆ.

ಅಲ್ಲದೇ ರಾಪಿಡ್ ಟೆಸ್ಟ್ ನಡೆಸುತ್ತಿರುವ ಕಡೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲೀಗ ಶಾಲೆಗಳನ್ನು ಪುನರಾರಂಭ ಮಾಡಿರುವ ಆಂಧ್ರ ಪ್ರದೇಶ ಸರಕಾರದ ವಿರುದ್ದ ಪೋಷಕರು ಇದೀಗ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಆಂಧ್ರಪ್ರದೇಶ ಸರಕಾರ ಪ್ರಾಯೋಗಿಕವಾಗಿ ಶಾಲೆಗಳನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶಾಲೆಗಳನ್ನು ತೆರೆಯಲು ಪ್ಲ್ಯಾನ್ ಮಾಡಿಕೊಂಡಿತ್ತು. ಆಂಧ್ರಪ್ರದೇಶ ಸರಕಾರ ಶಾಲೆಗಳನ್ನು ತೆರೆಯುತ್ತಿದ್ದಂತೆಯೇ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸರಕಾರಗಳು ಶಾಲೆಗಳನ್ನು ಆರಂಭಿಸಲು ಉತ್ಸುಕವಾಗಿದ್ದವು.

ಆದರೆ ಶಾಲಾರಂಭದ ದಿನವೇ ಕೊರೊನಾ ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾಗಿರೋದು ಆಂಧ್ರಪ್ರದೇಶ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.