ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೊರೊನಾ ವಾರ್ಡ್ ಮಟ್ಟದಲ್ಲಿ ರೋಗಿಗಳ ಮೇಲೆ ನಿಗಾ ಇಡುವ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಶಾಲಾ ಶಿಕ್ಷಕರು, ವಿಕಲಚೇತನರು, ಅನಾರೋಗ್ಯ ಮತ್ತು ಗರ್ಭಿಣಿ ಶಿಕ್ಷಕರಿಗೆ ಕೋವಿಡ್ ಕಾರ್ಯದಿಂದ ವಿನಾಯಿತಿಯನ್ನು ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.

ಜುಲೈ 9ರಂದು ಆದೇಶ ಹೊರಡಿಸಿದ್ದ ಬಿಬಿಎಂಪಿಯು 50 ವರ್ಷಕ್ಕಿಂತ ಮೇಲ್ಪಟ್ಟ ಶಾಲಾ ಶಿಕ್ಷಕರು, ವಿಕಲಚೇತನರು, ಅನಾರೋಗ್ಯ ಮತ್ತು ಗರ್ಭಿಣಿ ಶಿಕ್ಷಕರಿಗೆ ಬೆಂಗಳೂರಿನಲ್ಲಿ ಕೋವಿಡ್ ಕರ್ತವ್ಯದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿಸಿತ್ತು. ಆದೇಶದ ನಡುವೆಯೂ
ಬೆಂಗಳೂರು ಉತ್ತರ ಮತ್ತು ದಕ್ಷಿಣ (ಶೈಕ್ಷಣಿಕ ವಿಭಾಗಗಳು) ದಲ್ಲಿ 5,000 ಸರ್ಕಾರಿ ಶಾಲಾ ಶಿಕ್ಷಕರು ವಿನಾಯಿತಿ ಪಡೆಯಲು ಅರ್ಹರಾಗಿದ್ದಾರೆ. ಈ ಬಗ್ಗೆ ಹಿರಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೂ, ಶಿಕ್ಷಕರಿಗೆ ಅಂತಹ ಯಾವುದೇ ವಿನಾಯಿತಿಗಳನ್ನು ನೀಡಲಾಗಿಲ್ಲ. ಈ ಕುರಿತು ಶಿಕ್ಷಕರ ಸಂಘ ಸಚಿವರ ಮೇಲೆ ಒತ್ತಡವನ್ನು ಹೇರಿತ್ತು.

ಈ ಹಿನ್ನೆಲೆಯಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಗುರುವಾರ ಪತ್ರ ಬರೆದಿದ್ದು, ದುರ್ಬಲ ಶಿಕ್ಷಕರಿಗೆ ಕೊರೋನಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ತಿಳಿಸಿದ್ದಾರೆ. ದುರ್ಬಲ ಶಿಕ್ಷಕರನ್ನು ಕೊರೊನಾ ಕರ್ತವ್ಯಕ್ಕೆ ನಿಯೋಜನೆ ಮಾಡುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ದುರ್ಬಲ ಶಿಕ್ಷಕರಿ ಕೊರೋನಾ ಕರ್ತವ್ಯದಿಂದ ವಿನಾಯಿತಿ ನೀಡಿ ಎಂದು ತಿಳಿಸಿದ್ದಾರೆ.