ತುಮಕೂರು : ಕೊರೊನಾ ಹೆಮ್ಮಾರಿ ಕೊರೊನಾ ವಾರಿಯೆರ್ಸ್ ಆಗಿ ದುಡಿಯುತ್ತಿರುವ ಶಿಕ್ಷಣ ಇಲಾಖೆಯನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ದಕ್ಷ ಅಧಿಕಾರಿಯಾಗಿದ್ದು, ಶಿಕ್ಷಕ ಸಮುದಾಯಕ್ಕೆ ಪ್ರೀತಿ ಪಾತ್ರರಾಗಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರೋರ್ವರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದು, ಶಿಕ್ಷಕ ಸಮುದಾವನ್ನೇ ಆತಂಕಕ್ಕೆ ದೂಡಿದೆ.

ತುಮಕೂರು ಮೂಲ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಶಾಕೀರ್ ಅಲಿಖಾನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸಿದ್ದಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಶಾಕೀರ್ ಅಲಿಖಾನ್ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಸ್ನೇಹ ಜೀವಿಯಾಗಿದ್ದ ಶಾಕೀರ್ ಆಲಿಖಾನ್ ಅವರು ಈ ಹಿಂದೆ ತುಮಕೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಸುಮಾರು ಎರಡೂವರೆ ವರ್ಷಗಳ ಕಾಲ ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಕಳೆದ 8 ತಿಂಗಳಿನಿಂದಲೂ ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಶಾಕೀರ್ ಅಲಿಖಾನ್ ಅವರು ಶಿಕ್ಷಕರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಅಲ್ಲದೇ ತಮ್ಮ ದಕ್ಷ ಹಾಗೂ ಪ್ರಾಮಾಣಿಕತೆಯಿಂದಲೇ ಉತ್ತಮ ಅಧಿಕಾರಿಯೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅಲ್ಲದೇ ಸದ್ಯದಲ್ಲಿಯೇ ಡಿಡಿಪಿಐ ಆಗಿ ನೇಮಕವಾಗುವವರಿದ್ದರು.
ಆದ್ರೆ ಕೊರೊನಾ ಹೆಮ್ಮಾರಿ ದಕ್ಷ ಶಿಕ್ಷಣಾಧಿಕಾರಿಯನ್ನು ಬಲಿ ಪಡೆದಿದ್ದು, ಶಿಕ್ಷಕ ಸಮುದಾಯ ಕಂಬನಿ ಮಿಡಿಯುತ್ತಿದ್ದಾರೆ. ಅಲಿಖಾನ್ ಅವರಿಗೆ 6, 12 ಹಾಗೂ 17 ವರ್ಷದ ಮೂವರು ಪುತ್ರಿಯರಿದ್ದಾರೆ. ಇನ್ನು ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಅಲಿಖಾನ್ ಅವರ ಸಹೋದರ ಕೂಡ ಕಳೆದೊಂದು ವಾರದ ಹಿಂದೆಯಷ್ಟೇ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.

ರಾಜ್ಯದಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿಗೆ ಬಲಿಯಾವವರ ಸಂಖ್ಯೆಯ ಹೆಚ್ಚುತ್ತಿದೆ. ಅದ್ರಲ್ಲೂ ಕೊರೊನಾ ಕೋವಿಡ್ ಸರ್ವೆ, ಹೆಲ್ತ್ ವಾಚ್, ಚೆಕ್ ಪೋಸ್ಟ್ ಡ್ಯೂಟಿ ಮಾಡಿದ್ದ ಶಿಕ್ಷಕರನ್ನು ಇದೀಗ ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ವಿದ್ಯಾಗಮ ಡ್ಯೂಟಿ ಸೇರಿದಂತೆ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಶಿಕ್ಷಕರು ಇದೀಗ ಆತಂಕಕ್ಕೆ ಸಿಲುಕಿದ್ದಾರೆ.

ಇದುವರೆಗೆ ಅಧಿಕಾರಿಗಳು ಹಾಗೂ ಶಿಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆ 10ಕ್ಕೂ ಅಧಿಕ ಮಂದಿ ಕೊರೊನಾ ಹೆಮ್ಮಾರಿಯ ಆರ್ಭಟಕ್ಕೆ ಬಲಿಯಾಗಿ ಹೋಗಿದ್ದಾರೆ. ಸರಕಾರ ಒಂದೆಡೆ ಶಿಕ್ಷಕರನ್ನು ಕೊರೊನಾ ಡ್ಯೂಟಿಗೆ ನಿಯೋಜಿಸಿದ್ರೆ, ಇನ್ನೊಂದೆಡೆ ವಿದ್ಯಾಗಮ ಯೋಜನೆಯ ಜಾರಿಯ ಕುರಿತು ಶಿಕ್ಷಕರ ಮೇಲೆ ಒತ್ತಡವನ್ನು ಹೇರಲಾಗುತ್ತಿದೆ.

ಸರಕಾರ ಇನ್ನಾದ್ರೂ ಕೊರೊನಾ ವಾರಿಯರ್ಸ್ ಆಗಿ ದುಡಿಯುವ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕನಿಷ್ಠ ಕೊರೊನಾ ಸಂರಕ್ಷಣಾ ಕಿಟ್ ಗಳನ್ನು ಒದಗಿಸುವ ಕಾಯಕವನ್ನಾದ್ರೂ ಮಾಡಲೇ ಬೇಕಾದ ಅನಿವಾರ್ಯತೆಯಿದೆ.