ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರೋ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮಾರ್ಚ್ ಅಂತ್ಯದವರೆಗೂ ರಜೆ ಘೋಷಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನು ಮುಚ್ಚಲು ಇಲಾಖೆ ನಿರ್ಧರಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಭಾನುವಾರ ಸಂಜೆಯೊಳಗೆ ನಿಲಯಗಳನ್ನು ತೊರೆಯಲೇ ಬೇಕು. ಆದರೆ ಕಾಲೇಜಿಗೆ ಹಿಂದಿರುಗುವಾಗ ಕಡ್ಡಾಯವಾಗಿ ಕೊರೊನಾ ಸೋಂಕು ಇಲ್ಲಾ ಅನ್ನೋ ಕುರಿತ ಪ್ರಮಾಣಪತ್ರ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯ ಸರಕಾರ ಕೊರೊನಾ ನಿಯಂತ್ರಣಕ್ಕೆ ಒಂದು ವಾರಗಳ ಕಾಲ ಶಾಲೆಗೆ ರಜೆ ನೀಡಿತ್ತು. ಆದರೆ ಕಾಲೇಜು ಶಿಕ್ಷಣ ಇಲಾಖೆ ಮಾರ್ಚ್ 28ರ ವರೆಗೆ ರಜೆಯನ್ನು ಘೋಷಿಸಿತ್ತು. ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯಗಳಲ್ಲಿ ವಾಸಿಸುವುದರಿಂದ ಕೊರೊನಾ ಹರಡುವ ಭೀತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿಗೆ ಬೀಗ ಹಾಕುವಂತೆ ಸೂಚಿಸಿದ್ದು, ಊಟೋಪಚಾರ ವ್ಯವಸ್ಥೆಗೆ ನಿರ್ಬಂಧ ಹೇರಿದೆ.

ಹೀಗಾಗಿ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆಯಲೇ ಬೇಕಾಗಿದೆ. ರಜಾ ಅವಧಿ ಮುಗಿದನಂತರ ಹಾಸ್ಟೆಲ್ ವಿದ್ಯಾರ್ಥಿಗಳು ಕೋವಿಡ್-19 (ಕೊರೊನಾ ವೈರಸ್) ಸೋಂಕು ಇರದ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದೆ. ಮಾತ್ರವಲ್ಲ ರಜಾ ಅವಧಿ ಮುಗಿದನಂತರ ಎಲ್ಲಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದಲೂ ಸಹ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಲ್ಲಿ, ಕಛೇರಿಗಳಲ್ಲಿ ಬೋಧಕ/ಬೋಧಕೇತರ ಸಿಬ್ಬಂದಿ ಎಂದಿನಂತೆ ಕೆಲಸ ಕಾರ್ಯ ನಿರ್ವಹಿಸುತ್ತಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.