ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ಆರ್ಭಟಿಸುತ್ತಿದೆ. ಈ ನಡುವಲ್ಲೇ ಕೇಂದ್ರ ಸರಕಾರ ಸಪ್ಟೆಂಬರ್ 1ರಿಂದ ಶಾಲೆಗಳನ್ನು ಪುನರಾರಂಭಿಸಲು ಚಿಂತನೆ ನಡೆಸಿದೆ. ಆದರೆ ಆರೋಗ್ಯ ಇಲಾಖೆ ಶಾಲೆಗಳ ಪುನರಾರಂಭಕ್ಕೆ ಒಪ್ಪಿಗೆ ಸೂಚಿಸಿಲ್ಲ !
ಹೌದು, ಕೊರೊನಾ ವೈರಸ್ ಸೋಂಕಿಗೆ ದೇಶದಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ತುತ್ತಾಗಿದ್ದಾರೆ. ಸೋಂಕಿಗೆ ಬಲಿಯಾಗುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಕೇಂದ್ರ ಸರಕಾರ ಈಗಾಗಲೇ ಅನ್ ಲಾಕ್ ಮಾರ್ಗಸೂಚಿಯ ಅನ್ವಯ ಹಲವು ಸೇವೆಗಳನ್ನು ಪುನರಾರಂಭಿಸಿದೆ. ಇದೀಗ ಅನ್ ಲಾಕ್ ಮಾರ್ಗಸೂಚಿಯ ಅನ್ವಯ ಶಾಲೆಗಳನ್ನು ತೆರೆಯಲು ಚಿಂತನೆ ನಡೆಸಿದೆ.

ಆದರೆ ಅಗಸ್ಟ್ ಅಂತ್ಯದ ವೇಳೆಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30 ಲಕ್ಷಕ್ಕೆ ಏರಿಕೆಯಾಗಲಿದೆ. ಈ ನಡುವಲ್ಲೇ ಶಾಲೆಗಳನ್ನು ಪುನರಾರಂಭಿಸಿದ್ರೆ ಕೊರೊನಾ ವೈರಸ್ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡಲಿದೆ ಅನ್ನುವ ಆತಂಕವನ್ನು ಆರೋಗ್ಯ ಇಲಾಖೆ ವ್ಯಕ್ತಪಡಿಸುತ್ತಿದೆ.

ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ವಿಶ್ವದ ಹಲವು ರಾಷ್ಟ್ರಗಳು ಶಾಲೆ, ಕಾಲೇಜುಗಳನ್ನು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪುನರಾರಂಭಿಸಿತ್ತು. ಆದರೆ ಶಾಲಾರಂಭಗೊಳ್ಳುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕೋವಿಡ್ 19 ಸೋಂಕು ತಗುಲಿತ್ತು. ಹೀಗಾಗಿಯೇ ಹಲವು ರಾಷ್ಟ್ರಗಳಲ್ಲಿ ಶಾಲೆಗಳನ್ನು ಮತ್ತೆ ಮುಚ್ಚಲಾಗಿದೆ ಎಂದು ಸಚಿವಾಲಯ ಹೇಳಿದೆ.

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಸೆ. 1ರಿಂದ ದೇಶದಾದ್ಯಂತ ಶಾಲೆಗಳನ್ನು ಆರಂಭಿಸುವ ಬಗ್ಗೆ ಒಲವು ವ್ಯಕ್ತಪಡಿಸಿತ್ತು. ಆದ್ರೀಗ ಆರೋಗ್ಯ ಇಲಾಖೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಿತದೃಷ್ಟಿಯನ್ನು ನೋಡಿಕೊಂಡು ಶಾಲೆಗಳನ್ನು ಆರಂಭಿಸಬೇಕು ಎಂಬ ಅಭಿಪ್ರಾಯವನ್ನು ಆರೋಗ್ಯ ಇಲಾಖೆ ಹೊಂದಿದೆ.