ನವದೆಹಲಿ : ಒಂದೆಡೆ ದಿನ ಕಳೆದಂತೆ ಕೊರೊನಾ ಸೋಂಕಿನ ತೀವ್ರತೆ. ಇನ್ನೊಂದೆಡೆ ಶೈಕ್ಷಣಿಕ ಚಟುವಟಿಕೆಗಳ ಆರಂಭದ ಆತಂಕ. ಈ ನಡುವಲ್ಲೇ ಕೇಂದ್ರ ಸರಕಾರ ಗ್ರೀನ್ ಹಾಗೂ ಆರೆಂಜ್ ಝೋನ್ ಗಳಲ್ಲಿ ಶಾಲಾ, ಕಾಲೇಜು ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಚಿಂತನೆ ನಡೆಸಿದೆ.

ಆರಂಭದಲ್ಲಿ ಗ್ರೀನ್ ಹಾಗೂ ಆರೆಂಜ್ ವಲಯಗಳಲ್ಲಿ ಶೇ.30ರಷ್ಟು ಹಾಜರಾತಿಯೊಂದಿಗೆ ತರಗತಿಗಳು ಆರಂಭಗೊಳ್ಳಲಿವೆ. ಆರಂಭದಲ್ಲಿ 8ನೇ ತರಗತಿ ಮೇಲ್ಪಟ್ಟು ಶಾಲೆಗಳು ಆರಂಭಗೊಳ್ಳಲಿದ್ದು, ಶೇ.100 ಹಾಜರಾತಿಯೊಂದಿಗೆ ಶಾಲೆಗಳು ಆರಂಭವಾದ ನಂತರವಷ್ಟೇ 7 ನೇ ತರಗತಿ ವರೆಗಿನ ಶಾಲೆಗಳು ಆರಂಭಗೊಳ್ಳುವ ಸೂಚನೆಯಿದೆ.


ಸಾಮಾನ್ಯವಾಗಿ ಅಗಸ್ಟ್ ತಿಂಗಳಿನಿಂದ ಶಾಲೆಗಳನ್ನು ಆರಂಭಿಸುವ ಕುರಿತು ಚಿಂತನೆಯನ್ನು ನಡೆಸಿರುವ ಕೇಂದ್ರ ಸರಕಾರ ಪ್ರೌಢ ಶಾಲೆ ಹಾಗೂ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಒಲವು ತೋರಿದೆ. ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುವುದು ಕಷ್ಟಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶಾಲೆಗಳನ್ನು ಆರಂಭಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ. ಆದರೆ ಸರಕಾರದಿಂದ ಈ ಕುರಿತು ಯಾವುದೇ ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ. ಅಲ್ಲದೇ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರುತ್ತಿರೋ ನಡುವಲ್ಲೇ ಶಾಲೆಗಳು ಸದ್ಯಕ್ಕೆ ಆರಂಭವಾಗೋದು ಕೂಡ ಅನುಮಾನವೆನ್ನಲಾಗುತ್ತಿದೆ.