Heat wave Alert Karnataka : ನೆತ್ತಿ ಸುಡುವ ಬಿಸಿಲು, ಕುಡಿಯೋಕೆ ನೀರಿಲ್ಲ : ಶಾಲೆಗಳಲ್ಲಿ ಮಕ್ಕಳ ಗೋಳು ಕೇಳೋರ್ಯಾರು ?

ಬೆಂಗಳೂರು : Heat wave Alert Karnataka: ರಾಜ್ಯದಾದ್ಯಂತ ಶಾಲೆಗಳು ಆರಂಭಗೊಂಡು ವಾರವೇ ಕಳೆದಿದೆ. ಆದರೆ ಈ ಬಾರಿ ಜೂನ್‌ ಮೊದಲ ವಾರ ಕಳೆದ್ರೂ ಮಳೆಯ ಸುಳಿವೇ ಇಲ್ಲ. ನೆತ್ತಿ ಸುಡುವ ಬಿಸಿಲು ಮಕ್ಕಳನ್ನು ಶಾಲೆಗಳಲ್ಲಿ ಹೈರಾಣಾಗಿಸುತ್ತಿದೆ. ಇನ್ನೊಂದೆಡೆಯಲ್ಲಿ ಬಹುತೇಕ ಶಾಲೆಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಆದರೆ ಬಿಸಿಲ ಝಳದಿಂದ ತತ್ತರಿಸಿರುವ ಮಕ್ಕಳ ಸಮಸ್ಯೆಯನ್ನು ಯಾರೂ ಆಲಿಸುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿಯೇ ಮುಂಗಾರು ಮಳೆ ಕರ್ನಾಟಕಕ್ಕೆ ಆಗಮನ ವಾಗುತ್ತಿತ್ತು. ಆದರೆ ಈ ಬಾರಿ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯ ಜಿಲ್ಲೆಗಳಲ್ಲಿ ಮಳೆಯ ಸುಳಿವೇ ಇಲ್ಲ. ಹೀಗಾಗಿ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ಬಹುತೇಕ ಶಾಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇದೇ ಮೊದಲ ಬಾರಿಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ.

ರಾಜ್ಯದಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಬೆಳಗ್ಗೆ 8 ಗಂಟೆ ಕಳೆಯುತ್ತಿದ್ದಂತೆಯೇ ಬಿಸಿಲ ಝಳ ಹೆಚ್ಚುತ್ತಿದ್ದು, ಸಂಜೆ 5 ಗಂಟೆಯವರೆಗೂ ಬಿಸಿಲ ತಾಪ ಕಡಿಮೆಯಾಗುತ್ತಿಲ್ಲ. ಜೂನ್‌ ಮೊದಲ ವಾರದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ ಈ ಬಾರಿ ಇಂದು ರಾಜ್ಯದಲ್ಲಿ 36 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ. ಅದ್ರಲ್ಲೂ ಶೇ.85 ರಷ್ಟು ಆದ್ರತೆ ಇರುವುದರಿಂದಾಗಿ ಬಿಸಿಲ ಝಳದಿಂದಾಗಿ ವಿಪರೀತ ಶಕೆಯ ವಾತಾವರಣ ಸೃಷ್ಟಿಯಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ತಾಪಮಾನ ಏರಿಕೆ ಕಂಡಿದೆ. ಈ ಬಾರಿ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ತಾಪಮಾನ ಏರಿಕೆಯಿಂದಾಗಿ ಮಕ್ಕಳಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬಂದಿವೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ಪಾಲನೆಯ ಕುರಿತು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿನ ಪೋಷಕರು ಈ ಹಿಂದೆಯೇ ಈ ಬಾರಿ ಶಾಲಾರಂಭ ಮುಂದೂಡುವಂತೆ ಪೋಷಕರು ಆಗ್ರಹಿಸಿದ್ದರು. ಆದರೆ ಜಿಲ್ಲಾಡಳಿತಗಳು ಶಾಲೆಯನ್ನು ಆರಂಭಿಸಿವೆ. ಕುಡಿಯುವ ನೀರಿಗೆ ಅಗತ್ಯಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದವು. ಆದ್ರೀಗ ಮಳೆಯ ಇನ್ನಷ್ಟು ವಿಳಂಭವಾಗುವ ಕುರಿತು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಇದು ಇನ್ನಷ್ಟು ಆತಂಕವನ್ನು ಮೂಡಿಸಿದೆ.

ಮಳೆ ಸುರಿಯದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಿನೇ ದಿನೇ ಬಿಸಿ ಏರುತ್ತಿದೆ. ನೆತ್ತಿ ಸುಡುವ ಸೂರ್ಯನಿಗೆ ಅಂಜಿ ಜನರು ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳಲ್ಲಿನ ಕೊಠಡಿಗಳಲ್ಲಿ ಮಕ್ಕಳಿಗೆ ಗಾಳಿ ಆಡುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಬಹುತೇಕ ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಶಾಲೆಗಳಿಗೆ ತುರ್ತಾಗಿ ಪೂರೈಸಬೇಕಾಗಿದೆ. ಕೇವಲ ಕರಾವಳಿ ಮಾತ್ರವಲ್ಲ ಮಲೆನಾಡು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೂ ಈ ಬಾರಿ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.

ಬಿಸಿಗಾಳಿಯಿಂದ ಬೇಸಿಗೆ ರಜೆ ವಿಸ್ತರಿಸಿದ ತಮಿಳುನಾಡು :

ಬಿಸಿಗಾಳಿಯ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಶಾಲೆಗಳಿಗೆ ನೀಡಿರುವ ಬೇಸಿಗೆ ರಜೆಯನ್ನು ವಿಸ್ತರಣೆ ಮಾಡಿದೆ. ಶಿಕ್ಷಣ ಇಲಾಖೆ ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ಈ ಹಿಂದೆ ಜೂನ್‌1 ರಿಂದ 6 ರಿಂದ 12 ನೇ ತರಗತಿ ವರೆಗೆ ಹಾಗೂ ಜೂನ್‌ 5 ರಿಂದ ಸಂಪೂರ್ಣ ಶಾಲೆಗಳು ಆರಂಭಗೊಳ್ಳಬೇಕಾಗಿತ್ತು. ಆದರೆ ಬಿಸಿಗಾಳಿ, ಹೆಚ್ಚುತ್ತಿರುವ ತಾಪಮಾನ, ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲಯಲ್ಲಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರ ಜೊತೆಗೆ ಮಾತುಕತೆ ನಡೆಸಿ ಶಾಲಾರಂಭವನ್ನು ಮತ್ತೊಮ್ಮೆ ಮುಂದೂಡಿಕೆ ಮಾಡಿದ್ದಾರೆ. ತಮಿಳುನಾಡು ಸರಕಾರ ಇದೀಗ ಶಾಲಾರಂಭವನ್ನು ಜೂನ್ 12ಕ್ಕೆ ಮುಂದೂಡಿಕೆ ಮಾಡಲಾಗಿದೆ. ಆರಂಭದಲ್ಲಿ 6 ರಿಂದ 12 ನೇ ತರಗತಿಗಳು ಪುನರಾರಂಭಗೊಳ್ಳಲಿದ್ದು,ಜೂನ್ 14 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳು ಪುನರಾರಂಭಗೊಳ್ಳಲಿವೆ. ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಸರಕಾರದ ಮೇಲೆ ಸಾಕಷ್ಟು ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಇನ್ನು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿರುವ ಅಂಕಿ ಅಂಶಗಳ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ತಮಿಳುನಾಡು ರಾಜ್ಯದಾದ್ಯಂತ ತಾಪಮಾನವು 40-42 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ, ಇದು ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಲಿದೆ. ಇದರಿಂದಾಗಿ ಬಿಸಿ ಹಾಗೂ ಆರ್ದ್ರ ವಾತಾರಣ ಹೆಚ್ಚಳವಾಗಲಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಧುರೈ ವಿಮಾನ ನಿಲ್ದಾಣದ ಕೇಂದ್ರದಲ್ಲಿ ರಾಜ್ಯದ ಗರಿಷ್ಠ ತಾಪಮಾನ 40.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕಡಲೂರು 40 ಡಿಗ್ರಿ ಸೆಲ್ಸಿಯಸ್‌ನಲ್ಲಿದೆ. ಚೆನ್ನೈನ ನುಂಗಂಬಾಕ್ಕಂನಲ್ಲಿ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬಿಸಿಗಾಳಿ ಹಿನ್ನೆಲೆ ಸರಕಾರದ ಮಾರ್ಗಸೂಚಿಯಲ್ಲೇನಿದೆ ?

ಬಿಸಿಗಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಳೆದ ವರ್ಷ ಸುತ್ತೋಲೆಯನ್ನು ಹೊರಡಿಸಿತ್ತು. ಅದರಲ್ಲಿರುವ ಅಂಶಗಳನ್ನು ನೋಡುವುದಾದ್ರೆ,

ಶಾಲಾ ಸಮಯ, ದಿನಚರಿಯಲ್ಲಿ ಬದಲಾವಣೆ :

ತಾಪಮಾನ ವಿಪರೀತ ಏರಿಕೆಯಾಗಿರುವ ಸಂದರ್ಭದಲ್ಲಿ ಶಾಲಾ ಸಮಯ ಮತ್ತು ದಿನಚರಿಯಲ್ಲಿ ಮಾರ್ಪಾಡು ಮಾಡಬೇಕು. ಶಾಲೆಗಳನ್ನು ಬೇಗನೇ ಆರಂಭಿಸಿ ಮಧ್ಯಾಹ್ನದ ಮೊದಲೇ ಮುಗಿಸಬಹುದು. ವಿದ್ಯಾರ್ಥಿಗಳ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುವ ಹೊರಾಂಗಣ ಕ್ರೀಡಾಂಗಣ ಚಟುವಟಿಕೆಗಳಿಗೆ ಬ್ರೇಕ್‌ ಹಾಕುವುದು. ಶಾಲಾ ಅಸ್ಸೆಂಬ್ಲಿಯನ್ನು ಮುಚ್ಚಿದ ಪ್ರದೇಶದಲ್ಲಿ ಅಥವಾ ಕಡಿಮೆ ಸಮಯದಲ್ಲಿ ಮುಗಿಸುವುದು. ಇದನ್ನೂ ಓದಿ : Hijab Ban Reverse : ಹಿಜಾಬ್ ನಿಷೇಧ ವಾಪಾಸ್ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು ?

ಸಾರಿಗೆ ಸಂಚಾರ :

ಇನ್ನು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಬಸ್ಸುಗಳಲ್ಲಿಯೂ ಮಾರ್ಪಾಡು ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಶಾಲಾ ಬಸ್‌ ಹಾಗೂ ವ್ಯಾನ್‌ಗಳಲ್ಲಿ ಕಿಕ್ಕಿರಿದು ಮಕ್ಕಳನ್ನು ತುಂಬಬಾರದು, ಅಲ್ಲದೇ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ವಾಹನಗಳಲ್ಲಿ ಸಾಗಿಸಬಾರದು. ಶಾಲಾ ಬಸ್‌ ಅಥವಾ ವ್ಯಾನ್‌ಗಳಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆಯ ಕಿಟ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಇನ್ನು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್‌ಗಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳು ತಲೆಗೆ ಮುಚ್ಚಿಕೊಂಡು ಬರುವಂತೆ ಕಡ್ಡಾಯವಾಗಿ ಸೂಚನೆಯನ್ನು ನೀಡಬೇಕು. ಸಾರ್ವಜನಿಕ ಸಾರಿಗೆಯನ್ನು ತಪ್ಪಿಸಲು ಮತ್ತು ಬಿಸಿಲಿನಲ್ಲಿ ಅವರ ಸಮಯವನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಮಟ್ಟಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಪೋಷಕರಿಗೆ ಸೂಚನೆಯನ್ನು ನೀಡಬೇಕು. ಅಷ್ಟೇ ಅಲ್ಲದೇ ಶಾಲಾ ಬಸ್‌ ಅಥವಾ ವ್ಯಾನ್‌ಗಳನ್ನು ನೆರಳಿನ ಪ್ರದೇಶದಲ್ಲಿ ನಿಲ್ಲಿಸುವಂತೆ ಕ್ರಮವಹಿಸಬೇಕು.

ಜಲಸಂಚಯನ :

ಬಿಸಿಗಾಳಿ ಅಥವಾ ತಾಪಮಾನ ಏರಿಕೆ ಮಕ್ಕಳ ಮೇಲೆ ನೇರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ನೀರಿನ ಬಾಟಲಿಗಳು, ಕ್ಯಾಪ್‌ಗಳು ಮತ್ತು ಛತ್ರಿಗಳನ್ನು ಒಯ್ಯುವಂತೆ ಪೋಷಕರಿಗೆ ಸೂಚನೆಯನ್ನು ನೀಡಬೇಕು. ಶಾಲೆಗಳ ಅನೇಕ ಸ್ಥಳಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಒದಗಿಸಬೇಕು. ಪ್ರತೀ ಅವಧಿಯಲ್ಲಿಯೂ ಮಕ್ಕಳು ನೀರನ್ನು ಕುಡಿಯುವಂತೆ ನೋಡಿಕೊಳ್ಳಬೇಕು. ಮಕ್ಕಳು ಮನೆಗೆ ಹಿಂದಿರುಗುವ ವೇಳೆಯಲ್ಲಿಯೂ ಸಾಕಷ್ಟು ನೀರು ಕುಡಿಯುವಂತೆ ಸೂಚಿಸಬೇಕು. ಇದನ್ನೂ ಓದಿ : Students bus pass validity : ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ, ಜೂನ್ 15ರ ವರೆಗೆ ಕೆಎಸ್ಆರ್ ಟಿಸಿ ಬಸ್ ಪಾಸ್ ವಿಸ್ತರಣೆ

ಆಹಾರ ಮತ್ತು ಊಟ :

ತಾಪಮಾನ ಏರಿಕೆಯು ಮಕ್ಕಳ ಆಹಾರವನ್ನು ಹಾಳು ಮಾಡುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಹಾಗೂ ತಾಜಾ ಆಹಾರವನ್ನೇ ನೀಡಬೇಕು. ಟಿಫನ್‌ ಬಾಕ್ಸ್‌ಗಳಲ್ಲಿಯೂ ಮಕ್ಕಳು ಹಳಸಿದ ಆಹಾರವನ್ನು ಕೊಂಡೊಯ್ಯದಂತೆ ಸಲಹೆ ನೀಡಬೇಕು. ಶಾಲೆಗಳಲ್ಲಿನ ಕ್ಯಾಂಟೀನ್‌ಗಳು ತಾಜಾ ಮತ್ತು ಆರೋಗ್ಯಕರ ಆಹಾರವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು. ಮಧ್ಯಾಹ್ನದ ಊಟ/ಟಿಫಿನ್ ಸಮಯದಲ್ಲಿ ಲಘು ಆಹಾರವನ್ನು ಸೇವಿಸುವಂತೆ ಮಕ್ಕಳಿಗೆ ಸಲಹೆ ನೀಡಬಹುದು.

ತರಗತಿ ಕೊಠಡಿಗಳ ನಿರ್ವಹಣೆ :

ತಾಪಮಾನ ಏರಿಕೆಯಿಂದಾಗಿ ಶಾಲೆಗಳಲ್ಲಿನ ಕೊಠಡಿಗಳಲ್ಲಿ ಸರಿಯಾಗಿ ಗಾಳಿಯ ಹರಿವು ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಫ್ಯಾನ್‌ಗಳಿಗೆ ವಿದ್ಯುತ್‌ ಬ್ಯಾಕ್‌ಅಪ್‌ ವ್ಯವಸ್ಥೆ ಯನ್ನು ಮಾಡಿಕೊಳ್ಳಬೇಕು. ಸೂರ್ಯನ ಬೆಳಕನ್ನು ನೇರವಾಗಿ ತರಗತಿಯೊಳಗೆ ಪ್ರವೇಶಿಸುವುದನ್ನು ತಡೆಯಲು ಪರದೆಗಳನ್ನು ಬಳಸಬೇಕು. ತರಗತಿ ಕೊಠಡಿಗಳು ಸದಾ ತಂಪಾಗಿರುವ ವಾತಾವರಣ ಇರುವಂತೆ ನೋಡಿಕೊಳ್ಳಬೇಕು.

ಸಮವಸ್ತ್ರ :

ಇನ್ನು ಸಮವಸ್ತ್ರದ ವಿಚಾರದಲ್ಲಿಯೂ ನಿಯಮಗಳನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳು ಸಡಿಲವಾದ ಮತ್ತು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಲು ಅನುಮತಿಯನ್ನು ನೀಡಬಹುದು. ಶಾಲೆಗಳು ನೆಕ್ ಟೈಗಳಂತಹ ಸಮವಸ್ತ್ರದ ಬಗ್ಗೆ ನಿಯಮಗಳನ್ನು ಸಡಿಲಿಸಬಹುದು. ಚರ್ಮದ ಬೂಟುಗಳ ಬದಲಿಗೆ ಕ್ಯಾನ್ವಾಸ್ ಬೂಟುಗಳನ್ನು ಅನುಮತಿಸಬಹುದು. ಪೂರ್ಣ ತೋಳಿನ ಶರ್ಟ್ ಧರಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಬಹುದು. ಇದನ್ನೂ ಓದಿ : ಶಾಲೆಯ ಪಠ್ಯ ಪುಸ್ತಕ ಪರಿಷ್ಕರಣೆ : ನೂತನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು ?

ಪ್ರಥಮ ಚಿಕಿತ್ಸಾ ಸೌಲಭ್ಯಗಳು :

ಮಕ್ಕಳು ತಾಪಮಾನ ಏರಿಕೆಯಿಂದ ಸಮಸ್ಯೆ ಉಂಟಾಗಬಾರದು ಅನ್ನೋ ಕಾರಣಕ್ಕೆ ಶಾಲೆಗಳಲ್ಲಿ ಓಆರ್‌ಎಸ್‌ ( ORS ) ದ್ರಾವಣದ ಸ್ಯಾಚೆಟ್‌ಗಳು ಅಥವಾ ಸೌಮ್ಯವಾದ ಶಾಖ -ಸ್ಟ್ರೋಕ್ ಚಿಕಿತ್ಸೆಗಾಗಿ ಉಪ್ಪು ಮತ್ತು ಸಕ್ಕರೆ ದ್ರಾವಣವು ಶಾಲೆಗಳಲ್ಲಿ ಸುಲಭವಾಗಿ ಲಭ್ಯವಿರಬೇಕು. ಲಘು ಶಾಖ-ಸ್ಟ್ರೋಕ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತರಬೇತಿ ನೀಡಬೇಕು. ಶಾಖದ ಹೊಡೆತದ ಸಂದರ್ಭದಲ್ಲಿ ಶಾಲೆಗಳು ಹತ್ತಿರದ ಆಸ್ಪತ್ರೆ/ ಕ್ಲಿನಿಕ್/ವೈದ್ಯರು/ನರ್ಸ್ ಇತ್ಯಾದಿಗಳಿಗೆ ತ್ವರಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯ ವೈದ್ಯಕೀಯ ಕಿಟ್‌ಗಳು ಶಾಲೆಯಲ್ಲಿ ಲಭ್ಯವಿರಬೇಕು.

ವಿದ್ಯಾರ್ಥಿಗಳು ಕಡ್ಡಾಯವಾಗಿ ಇವುಗಳನ್ನು ಮಾಡಲೇ ಬಾರದು :

  • ಖಾಲಿ ಹೊಟ್ಟೆಯಲ್ಲಿ ಅಥವಾ ಭಾರವಾದ ಆಹಾರವನ್ನು ಸೇವಿಸಿದ ನಂತರ ಹೊರಗೆ ಹೋಗಬೇಡಿ.
  • ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ, ವಿಶೇಷವಾಗಿ ಮಧ್ಯಾಹ್ನ ಅಗತ್ಯವಿಲ್ಲದಿದ್ದರೆ.
  • ಮಧ್ಯಾಹ್ನ ಹೊರಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ.
  • ಬರಿಗಾಲಿನಲ್ಲಿ ಹೊರಗೆ ಹೋಗಬೇಡಿ.
  • ಜಂಕ್ / ಹಳಸಿದ / ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ

Heat wave Alert Karnataka Students water Problems in schools

Comments are closed.