
ನವದೆಹಲಿ: ಜೆಇಇ (ಜಂಟಿ ಪ್ರವೇಶ ಮುಖ್ಯ ಪರೀಕ್ಷೆ ) ಮತ್ತು ರಾಷ್ಟ್ರೀಯ ಅರ್ಹತೆ ಮತ್ತು ನೀಟ್-ಯುಜಿ (ಪ್ರವೇಶ ಪರೀಕ್ಷೆ)ಯನ್ನು ನಿಗದಿತ ಅವಧಿಯಲ್ಲಿಯೇ ನಡೆಸಲಾಗುವುದು ಎಂದು ಶಿಕ್ಷಣ ಸಚಿವಾಲಯ ಸ್ಪಷ್ಟನೆ ನೀಡಿದೆ.

ಸೆಪ್ಟೆಂಬರ್ 1ರಿಂದ 6 ರವರೆಗೆ ಜೆಇಇ (ಮುಖ್ಯ) ಪರೀಕ್ಷೆ ಮತ್ತು ಸೆಪ್ಟೆಂಬರ್ 13 ರಂದು ನೀಟ್ (ಯುಜಿ) ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ. ದೇಶದ ಪ್ರಮುಖ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಾಲೆಗಳ ಪ್ರವೇಶಕ್ಕಾಗಿ ನಡೆಯುವ ಜೆಇಇ ಮತ್ತು ನೀಟ್ ಪರೀಕ್ಷೆಯ ದಿನಾಂಕಗಳು ಬದಲಾವಣೆಯಾಗಬಹುದೆಂದು ಹೇಳಲಾಗಿತ್ತು. ಅಲ್ಲದೇ ಈ ಕುರಿತು ಸುದ್ದಿಗಳು ಹರಡಿದಾಡಿದ್ದವು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಿಗದಿತ ದಿನಾಂಕಗಳಂದೇ ಪರೀಕ್ಷೆಯನ್ನು ನಡೆಸುವುದಾಗಿ ಟ್ವಿಟ್ ಮಾಡಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆಯೂ ಮನವಿ ಮಾಡಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ನಿಗದಿತ ದಿನಾಂಕಗಳಂದೇ ಪರೀಕ್ಷೆ ನಡೆಸಲು ಸಿದ್ದತೆ ನಡೆಸಲಾಗಿದೆ.

ಜೆಇಇ ಮುಖ್ಯ ಪರೀಕ್ಷೆಗೆ ಸುಮಾರು ಒಟ್ಟು 8,58,273 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು ಈ ಪೈಕಿ 6,49,223 ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಯನ್ನು ನಡೆಸಲು ಇಲಾಖೆ ಮುಂದಾಗಿದೆ.