ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ನಿರ್ದೇಶಕರ ವಿರುದ್ದ ನ್ಯಾಯಾಂಗ ನಿಂದನೆ: ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ ಹೈಕೋರ್ಟ್

ಬೆಂಗಳೂರು: (Karnataka highcourt warning) ರಾಜ್ಯದ ಎಲ್ಲಾ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸಮವಸ್ತ್ರ ಶೂ ಹಾಗೂ ಸಾಕ್ಸ್‌ ವಿತರಿಸುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡದ ರಾಜ್ಯ ಸರಕಾರವನ್ನು ಕರ್ನಾಟಕ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಜೈಲು ಶಿಕ್ಷೆಯ ಎಚ್ಚರಿಕೆಯನ್ನು ನೀಡಿದೆ.

ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪೊಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್‌ ನೀಡಬೇಕು ಎಂದು 2019 ರ ಆ. 28 ರಂದು ನೀಡಿದ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರ ನೇತ್ರತ್ವದ ವಿಭಾಗೀಯ ಪೀಠ ಸರ್ಕಾರ ಹಾಗೂ ಅಧಿಕಾರಿಗಳ ಕಾರ್ಯವೈಕರಿಯನ್ನು ಖಂಡಿಸಿತು.

ಅಧಿಕಾರಿಯನ್ನು ಜೈಲಿಗೆ ಕಳುಹಿಸುತ್ತೇವೆ. ಆಗ ಮಕ್ಕಳಿಗೆ ಸಮವಸ್ತ್ರ ಹೇಗೆ ಬರುವುದಿಲ್ಲ ಎನ್ನುವುದನ್ನು ನೋಡುತ್ತೇವೆ. ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ ನಮ್ಮನ್ನು ಕಾಪಾಡಲು ನ್ಯಾಯಾಲಯವಿದೆ ಎಂಬುದು ಜನರಿಗೆ ಗೊತ್ತಾಗುತ್ತದೆ. ಮಾನ ಮರ್ಯಾದೆ ಇಲ್ಲದಿದ್ದರೆ ಅಧಿಕಾರಿಗಳು ಆರು ತಿಂಗಳು ಜೈಲಿಗೆ ಹೋಗಿಬರುತ್ತಾರೆ. ಆಗ ಏನೂ ಮಾಡುವುದಕ್ಕೆ ಆಗಲ್ಲ. ಕೋರ್ಟ್‌ ಗೆ ಸಹ ಎಲ್ಲೋ ಒಂದು ಕಡೆ ಸರಕಾರದ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು, ಸಮವಸ್ತ್ರ ಖರೀದಿಸಲು ರಾಜ್ಯ ಸರಕಾರ ಎಷ್ಟು ಹಣ ಬಿಡುಗಡೆ ಮಾಡಿದೆ. ಅದರಲ್ಲಿ ಎಷ್ಟು ಹಣ ಸದ್ಬಳಕೆಯಾಗಿದೆ ಎಂಬ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸಬೇಕು. ಹಾಗೆಯೇ 2019-20 ನೇ ಶೈಕ್ಷಣಿಕ ಸಾಲಿನಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಶೂ ಮತ್ತು ಸಾಕ್ಸ್‌ ವಿತರಣೆ ಮಾಡುವ ಮೂಲಕ ಸರಕಾರವು ಹೈಕೋರ್ಟ್‌ ಆದೇಶ ಪಾಲಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತರಿಪಡಿಸಿ ಎರಡು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.

ಸರಕಾರ ನೀಡಿದ ಪ್ರಮಾಣ ಪತ್ರವು ನ್ಯಾಯಾಲಯಕ್ಕೆ ತೃಪ್ತಿ ತಂದಿಲ್ಲ. ರಾಜ್ಯದ ಎಲ್ಲಾ 35 ಜಿಲ್ಲೆಗಳಲ್ಲಿ ಸಮವಸ್ತ್ರ ವಿತರಣೆಗೆ ಸರಕಾರ ಹಣ ಬಿಡುಗಡೆ ಮಾಡಿದೆಯೇ? ಅದರಲ್ಲಿ ಎಷ್ಟು ಬಳಕೆಯಾಗಿದೆ ಎಂಬ ಬಗ್ಗೆ ಡಿಡಿಪಿಗಳು ದಾಖಲೆಗಳನ್ನು ಪಡೆದು ಪರಿಶೀಲಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ, ಅದನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ನ್ಯಾಯಾಲಯ ಮರು ಪರಿಶೀಲನೆ ನಡೆಸಲಿದೆ ಎಂದು ಹೇಳಿದೆ. ಇದಕ್ಕೂ ಮೊದಲು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ನಿರ್ದೇಶಕರು ಸಲ್ಲಿಸಿರುವ ಪ್ರಮಾಣ ಪತ್ರ ಸರಕಾರಿ ವಕೀಲರು ನ್ಯಾಯಪೀಠಕ್ಕೆ ಒದಗಿಸಿದರು. ಸಮವಸ್ತ್ರ ಖರೀದಿಸಲು ಸರಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. 2019-20, 2020-21, 2021-22, 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಎಲ್ಲಾ ಮೂವತ್ತೈದು ಶೈಕ್ಷಣಿಕ ಜಿಲ್ಲೆಗಳ ಸರಕಾರಿ ಶಾಲೆಗಳ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ನೀಡಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: SSLC Preparatory Examination Fee: SSLC ಪೂರ್ವ ಸಿದ್ದತಾ ಪರೀಕ್ಷೆ ಶುಲ್ಕ 50 ರೂ.ಗೆ ಇಳಿಕೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಆ ಪ್ರಮಾಣ ಪತ್ರವನ್ನು ಪರಿಶೀಲಿಸಿದ ನ್ಯಾಯಪೀಠ, ಸಮವಸ್ತ್ರ, ಶೂ ಹಾಗೂ ಸಾಕ್ಸ್‌ ನೀಡಿರುವುದನ್ನು ಪುಷ್ಠೀಕರಿಸುವ ದಾಖಲೆ ಒದಗಿಸಿಲ್ಲ. ಸರಕಾರವು ಕೋರ್ಟ್‌ ಆದೇಶ ಪಾಲಿಸಿಲ್ಲ, ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಬೇಕೆಂಬ ಮನೋಭಾವ ಸರಕಾರಕ್ಕೆ ಇದ್ದರೆ, ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು, ನ್ಯಾಯಾಂಗ ನಿಂದರೆ ಆರೋಪದಿಂದ ತಪ್ಪಿಸಿಕೊಳ್ಳಬೇಕೆಂದು ಕೋರ್ಟ್‌ ಗೆ ಸುಮ್ಮನೆ ಪ್ರಮಾಣ ಪತ್ರ ಸಲ್ಲಿಸಿದರೆ ಸಾಲವು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಯ ವಿರುದ್ದ ನ್ಯಾಯಾಂಗ ನಿಂದರೆ ಆರೋಪ ಹೊರಿಸಲಾಗುವುದು ಎಂದು ತಿಳಿಸಿತು.

Karnataka highcourt warning: Contempt against director of comprehensive education Karnataka scheme: High court warns of jail term

Comments are closed.