ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆತಂಕ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗುತ್ತಲೇ ರಾಜ್ಯದಲ್ಲಿ ಶಾಲಾರಂಭದ ಮಾತುಗಳು ಕೇಳಿಬಂದಿತ್ತು. ಆದ್ರೀಗ ಶಾಲಾರಂಭಕ್ಕೆ ಕೊರೊನಾ ಎರಡನೇ ಅಲೆಯ ಆತಂಕ ಎದುರಾಗಿದೆ.

ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಬಾಗಿಲು ಮುಚ್ಚಿದ್ದ ಶಾಲೆಗಳು ಇನ್ನೂ ತೆರೆದಿಲ್ಲ. ನವೆಂಬರ್ 17ರಿಂದ ರಾಜ್ಯದಲ್ಲಿ ಕಾಲೇಜುಗಳು ಆರಂಭಗೊಂಡಿದ್ದರೂ ಕೂಡ ಮಕ್ಕಳ ಸಂಖ್ಯೆಯಲ್ಲಿ ತೀರಾ ಕಡಿಮೆಯಿದ್ದು, ರಾಜ್ಯದಾದ್ಯಂತ ಕೇವಲ ಶೇ.15 ರಷ್ಟು ವಿದ್ಯಾರ್ಥಿಗಳು ಮಾತ್ರವೇ ತರಗತಿಗಳಿಗೆ ಹಾಜರಾಗಿದ್ದಾರೆ. ಅದ್ರಲ್ಲೂ ಕಳೆದ ಮೂರು ದಿನಗಳ ಅವಧಿಯಲ್ಲಿ ಕಾಲೇಜಿಗೆ ಹಾಜರಾಗಿರುವವರ ಪೈಕಿ ಸುಮಾರು 170ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅದ್ರಲ್ಲೂ ಇನ್ನಷ್ಟು ಮಂದಿಯ ವರದಿ ಇನ್ನಷ್ಟೇ ಕೈ ಸೇರಬೇಕಾಗಿದ್ದು, ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೂ ಕೊರೊನಾ ಆತಂಕ ಎದುರಾಗಿದೆ.
ನೆರೆಯ ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭ ಮಾಡುತ್ತಿದ್ದಂತೆಯೇ ರಾಜ್ಯದಲ್ಲಿಯೂ ಶಾಲೆಗಳನ್ನು ಆರಂಭಿಸುವ ಮಾತುಗಳು ಕೇಳಿ ಬಂದಿತ್ತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿರ್ದಶನದ ಮೇರೆಗೆ ಶಿಕ್ಷಣ ಇಲಾಖೆಯ ಆಯುಕ್ತರಾಗಿರುವ ಅನ್ಬು ಕುಮಾರ್ ಅವರು ಮ್ಯಾರಥಾನ್ ಸಭೆಯನ್ನು ನಡೆಸಿ ಪೋಷಕರು, ಎಸ್ ಡಿಎಂಸಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ತಜ್ಞರ ವರದಿಯನ್ನು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
ಕೆಲವರು 9 ರಿಂದ 12ನೇ ತರಗತಿ ವರೆಗೆ ಶಾಲೆ, ಕಾಲೇಜುಗಳನ್ನು ಆರಂಭಿಸುವಂತೆ ಹೇಳುತ್ತಿದ್ರೆ, ಬಹುತೇಕ ಪೋಷಕರು ಶಾಲಾರಂಭ ಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೀಗ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳ ಸಭೆಯನ್ನು ಕರೆದಿದ್ದು, ಶಾಲಾರಂಭದ ಕುರಿತು ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನವೆಂಬರ್ ಆರಂಭದಲ್ಲಿ ಶಾಲಾರಂಭ ಮಾಡುವುದಕ್ಕೆ ಶಿಕ್ಷಣ ಇಲಾಖೆ ಮುಂದಾಗುತ್ತಿದ್ದಂತೆಯೇ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಳವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯಾಗಮ ಯೋಜನೆಯನ್ನು ಕೈಬಿಟ್ಟು, ಶಿಕ್ಷಕರಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಆದ್ರೀಗ ದಿನ ಕಳೆದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಕೊಂಚ ಮಟ್ಟಿಗೆ ಏರಿಕೆಯನ್ನು ಕಾಣುತ್ತಿದೆ. ಅದ್ರಲ್ಲೂ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಹಾಗೂ ಮೂರನೇ ಅಲೆ ಕಾಣಿಸಿಕೊಂಡಿದ್ದು, ಹಲವು ರಾಷ್ಟ್ರಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ನೀಡುವುದರ ಜೊತೆಗೆ ಲಾಕ್ ಡೌನ್ ಘೋಷಣೆಯನ್ನು ಮಾಡಲಾಗಿದೆ. ಅಷ್ಟೇ ಯಾಕೆ ನವದೆಹಲಿ, ಮಹಾರಾಷ್ಟ್ರಗಳಲ್ಲಿಯೂ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಹೀಗಾಗಿ ರಾಜ್ಯದಲ್ಲಿಯೂ ಕೊರೊನಾ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಅಂತಾ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕೂಡ ಎಚ್ಚರಿಕೆಯನ್ನು ನೀಡಿದ್ದಾರೆ.
ಕೊರೊನಾ ವೈರಸ್ ಸೋಂಕು ಕೊಂಚ ಏರಿಕೆಯಾಗುತ್ತಿರುವ ಹೊತ್ತಲ್ಲೇ ಶಾಲೆಗಳನ್ನು ಆರಂಭಿಸಿದ್ರೆ ಕೊರೊನಾ ಸ್ಪೋಟಗೊಳ್ಳುವ ಆತಂಕ ರಾಜ್ಯ ಸರಕಾರದ್ದು, ಇನ್ನೊಂದೆಡೆ ಕಾಲೇಜುಗಳನ್ನು ಆರಂಭಿಸಿದ್ದರೂ ಕೂಡ ವಿದ್ಯಾರ್ಥಿಗಳು ಅಷ್ಟೊಂದು ಮಟ್ಟದಲ್ಲಿ ಆಸಕ್ತಿಯನ್ನು ತೋರುತ್ತಿಲ್ಲ. ಅದ್ರಲ್ಲು ಶಾಲಾರಂಭದ ಬೆನ್ನಲ್ಲೇ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಚಿಂತನೆಯನ್ನು ನಡೆಸುತ್ತಿದೆ. ಮಾತ್ರವಲ್ಲ ಇತರ ರಾಜ್ಯಗಳಲ್ಲಿಯೂ ಶಾಲಾರಂಭ ಮಾಡಿರುವುದರ ಸ್ಥಿತಿಗತಿಯನ್ನು ಅರಿಯುವ ಕಾರ್ಯವನ್ನು ಮಾಡುತ್ತಿದೆ.
ಒಟ್ಟಿನಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಸಭೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಈ ಬಾರಿ ಶಾಲಾರಂಭವಾಗುತ್ತಾ ಇಲ್ಲವೇ ಅನ್ನೋ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳಲಿದೆ.