ಕೇರಳ : ನಿಫಾ ವೈರಸ್ ಸೋಂಕು (Nipah Virus ) ದೇವರನಾಡು ಕೇರಳದಲ್ಲಿ (Kerala) ಆತಂಕ ಮೂಡಿಸಿದೆ. ಈಗಾಗಲೇ ನಿಫಾ ವೈರಸ್ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಕೇರಳ ರಾಜ್ಯದಲ್ಲಿ ಸೆಪ್ಟೆಂಬರ್ 24 ರ ವರೆಗೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನಿಫಾ ವೈರಸ್ ಸೋಂಕಿಗೆ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಅಲ್ಲದೇ ಕೇರಳದ ವಿವಿಧ ಜಿಲ್ಲೆಗಳಲ್ಲಿ ನಿಫಾ ವೈರಸ್‌ಗೆ ತುತ್ತಾದವರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ. 1,080ಕ್ಕೂ ಅಧಿಕ ಮಂದಿ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಅಲ್ಲದೇ 130 ಮಂದಿ ಹೊಸದಾಗಿ ಈ ಪಟ್ಟಿ ಸೇರ್ಪಡೆಯಾಗಿದ್ದು, 327 ಮಂದಿ ಆರೋಗ್ಯ ಕಾರ್ಯಕರ್ತರು ಒಳಗೊಂಡಿದ್ದಾರೆ.

ಕೇರಳದಲ್ಲಿ ಕಳೆದ ಒಂದು ವಾರದಿಂದಲೂ ನಿಫಾ ವೈರಸ್ ಸೋಂಕು ಹರಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಶಾಲೆ, ಕಾಲೇಜು, ಟ್ಯೂಷನ್ ಸೆಂಟರ್ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೆಪ್ಟೆಂಬರ್ 24ರ ವರೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ರಜೆಯ ಅವಧಿಯು ಇನ್ನಷ್ಟು ವಿಸ್ತರಣೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕೇರಳದ ಕೋಂಝಿಕೋಡ್ ಜಿಲ್ಲೆಗೆ ಮಾತ್ರವೇ ಸದ್ಯ ರಜೆ ನೀಡಲಾಗಿದ್ದು, ಸೋಂಕು ಹರಡುವಿಕೆ ಹೆಚ್ಚಳವಾದ್ರೆ ಕೇರಳದ ಬಹುತೇಕ ಜಿಲ್ಲೆಗಳಲ್ಲಿನ ವಿದ್ಯಾ ಸಂಸ್ಥೆಗಳಿಗೆ ರಜೆ ನೀಡುವ ಸಾಧ್ಯತೆಯಿದೆ.
ಕೇರಳದಲ್ಲಿ ಇದುವರೆಗೆ 6 ಮಂದಿ ನಿಫಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ನಿಫಾ ವೈರಸ್‌ನಿಂದ ಸಾವನ್ನಪ್ಪಿರುವ ವ್ಯಕ್ತಿಗಳ ಅಂತ್ಯಕ್ರೀಯೆ ಯಲ್ಲಿ ಭಾಗಿಯಾದ 17 ಮಂದಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅಲ್ಲದೇ ಇತರ ಸಂಪರ್ಕಿತರ ಮೇಲೆಯೂ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದನ್ನೂ ಓದಿ : ನಿಫಾ ವೈರಸ್ ಸಂಪರ್ಕಿತರ ಪತ್ತೆಗೆ ಪೊಲೀಸರ ಸಹಾಯ ಕೋರಿದ ಕೇರಳ ಸರಕಾರ
ನಿಫಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕೇರಳ ಆರೋಗ್ಯ ಇಲಾಖೆ ಪ್ರತ್ಯೇಕವಾದ ಮಾರ್ಗಸೂಚಿಯನ್ನು ಹೊರಡಿಸಿದೆ. ಅಲ್ಲದೇ ನಿಫಾ ವೈರಸ್ ಪತ್ತೆಯಾಗಿರುವ ಕೇರಳದ ಕೋಝಿಕ್ಕೋಡ್ ಪ್ರದೇಶದಲ್ಲಿ ಕಂಟೈನ್ಮೆಂಟ್ ಝೋನ್ ಘೋಷಣೆ ಮಾಡಲಾಗಿದೆ. ಕೊರೊನಾ ವೈರಸ್ ಸೋಂಕಿನ ಮಾದರಿಯಲ್ಲಿಯೇ ನಿಫಾ ವೈರಸ್ ತಡೆಗೆ ಕೋಝಿಕ್ಕೋಡ್ ಕಂಟೈನ್ಮೆಂಟ್ ಝೋನ್ ತೆರೆಯಲಾಗಿದ್ದು, ಇದೀಗ ಕೇರಳದಾದ್ಯಂತ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇನ್ನು ನಿಫಾ ಪ್ರಕರಣಗಳ ಚಿಕಿತ್ಸೆಗಾಗಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ಬೆಡ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕೇರಳ ರಾಜ್ಯಕ್ಕೆ ಎಂಟ್ರಿಯಾಗುವ ಪ್ರತಿಯೊಬ್ಬರನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಶಾಲೆ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿಯೂ ನಿಫಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ನಿಫಾ ವೈರಸ್ ಸೋಂಕು ಸಾಮಾನ್ಯವಾಗಿ ಮನುಷ್ಯರಿಗೆ ಪ್ರಾಣಿಗಳಿಂದ ಹರಡುತ್ತದೆ. ಅದ್ರಲ್ಲೂ ಮುಖ್ಯವಾಗಿ ಬಾವಲಿಗಳಿಂದ ಹಡುತ್ತದೆ.

ಬಾವಲಿಗಳು ಕಚ್ಚಿರುವ ಹಣ್ಣು, ತರಕಾರಿಗಳನ್ನು ತಿನ್ನುವುದರಿಂದ ಈ ಸೋಂಕು ಹರಡುವ ಸಾಧ್ಯತೆ ತೀರಾ ಹೆಚ್ಚು. ಇನ್ನು ಈ ವೈರಸ್‌ನ ಕಾಲಾವಧಿ 4 ರಿಂದ 12 ದಿನಗಳು. ವೈರಸ್ ಸೋಂಕಿತ ವ್ಯಕ್ತಿಗಳಲ್ಲಿ ಆರಂಭದಲ್ಲಿ ಜ್ವರ, ತಲೆನೋವು, ಸುಸ್ತು, ವಾಂತಿ ಕಾಣಿಸಿಕೊಳ್ಳಲಿದೆ. ನಿಫಾ ಸೋಂಕಿತ ರೋಗಿಯ ನಡವಳಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಶೀತ, ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಡಬಹುದು. ಇನ್ನೂ ಕೆಲವರು ಸ್ನಾಯು ಸೆಳೆತ, ತೀವ್ರ ಆಯಾಸದಿಂದಲೂ ಬಳಲುವ ಸಾಧ್ಯತೆಯಿದೆ.
ಇದನ್ನೂ ಓದಿ : ಉಚಿತ ಎಲ್‌ಪಿಜಿ ಸಂಪರ್ಕ: ಬಡ, ಮಧ್ಯಮ ವರ್ಗದವರಿಗೆ ಸಿಹಿಸುದ್ದಿ, 75 ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್
ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲೇನಲ್ಲಾ. ಈ ಹಿಂದೆಯೂ 2018 ಮತ್ತು 2021 ರಲ್ಲಿ ಕೇರಳದಲ್ಲಿ ನಿಫಾ ಸೋಂಕು ವರದಿಯಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್ ಕೇರಳದ ಕೋಝಿಕ್ಕೋಡ್‌ನಲ್ಲಿ ಮೇ 19, 2018 ರಂದು ವರದಿಯಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆ (WHO) ನಿಫಾ ಸೋಂಕನ್ನು ಪ್ರಾಣಿಗಳಿಂದ ಜನರಿಗೆ ಹರಡುವ ಝೂನೋಟಿಕ್ ಕಾಯಿಲೆ ಎಂದು ವ್ಯಾಖ್ಯಾನಿಸಿದೆ. ಪ್ರಮುಖವಾಗಿ ಈ ಸೋಂಕು ಕಲುಷಿತ ಆಹಾರದ ಮೂಲಕ ಹರಡುತ್ತೆ. ನಿಫಾ ಸೋಂಕು ವಿಶ್ವದಲ್ಲಿ ಮೊದಲ ಬಾರಿಗೆ ಒತ್ತೆಯಾಗಿದ್ದು, ಮಲೇಷ್ಯಾದಲ್ಲಿ. ಹಂದಿಗಳಿಂದಾಗಿ ಈ ಸೋಂಕು ಹರಡಿತ್ತು ಎನ್ನಲಾಗುತ್ತಿದೆ.
ಇನ್ನು ಮಲೇಷ್ಯಾ ನಂತರದಲ್ಲಿ ಬಾಂಗ್ಲಾ ದೇಶ ಮತ್ತು ಭಾರತದಲ್ಲಿ ನಿಫಾ ಸೋಂಕು ಪತ್ತೆಯಾಗಿದ್ದು, ಹಣ್ಣುಗಳನ್ನು ಬಾವಲಿಗಳು ತಿನ್ನುವುದರಿಂದ ಈ ವೇಳೆ ಬಾವಲಿಗಳ ಮೂತ್ರ ಹಾಗೂ ಲಾಲಾರಸದಿಂದ ಹರಡಿದೆ. ಪ್ರಮುಖವಾಗಿ ಕಚ್ಚಾ ಖರ್ಜೂರ ಸೇವನೆಯಿಂದ ಈ ಸೋಂಕು ವ್ಯಾಪಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ, ಕರ್ನಾಟಕದಲ್ಲಿ ಹೈಲರ್ಟ್, ಏನಿದರ ಲಕ್ಷಣ ?
ನಿಪಾ ವೈರಸ್ (NiV) ಒಂದು ಝೂನೋಟಿಕ್ ವೈರಸ್, ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇದು ಮೊದಲು 1998 ರಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಹೊರಹೊಮ್ಮಿತು, ಪ್ರಾಥಮಿಕವಾಗಿ ದೇಶೀಯ ಹಂದಿಗಳ ಮೇಲೆ ಪರಿಣಾಮ ಬೀರಿದೆ. ಕೇವಲ ಹಂದಿ ಮಾತ್ರವಲ್ಲದೇ ನಾಯಿ, ಬೆಕ್ಕು, ಆಡು, ಕುದುರೆ, ಕುರಿ ಸೇರಿದಂತೆ ಹಲವು ಸಾಕುಪ್ರಾಣಿಗಳು ಹಾಗೂ ಬಾವಲಿಗಳಲ್ಲಿ ಈ ನಿಫಾ ವೈರಸ್ ಪತ್ತೆಯಾಗಿದೆ.
ನಿಫಾ ವೈರಸ್ ವಾಯುಗಾಮಿ ಸೋಂಕು ಅಲ್ಲ, ಸಾಕುಪ್ರಾಣಿಗಳಿಂದಲೇ ಅತೀ ವೇಗದಲ್ಲಿ ಈ ಸೋಂಕು ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಿಫಾ ಸೋಂಕಿತ ಪ್ರಕರಣಗಳ ಪೈಕಿ ಶೇಕಡಾ 40 ರಿಂದ 75 ರಷ್ಟು ಸಾವಿನ ಪ್ರಮಾಣ ಹೊಂದಿದೆ. ನಿಫಾ ಮಾರಣಾಂತಿಕವೂ ಹೌದು. ಜ್ವರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ರೆ ಸಾವನ್ನೂ ತರಲಿದೆ. ತೀವ್ರ ತೆರನಾಗಿ ಸೋಂಕು ದೇಹವನ್ನು ವ್ಯಾಪಿಸಿದ ನಂತರದಲ್ಲಿ ವೈರಸ್ ಎನ್ಸೆಫಾಲಿಟಿಸ್, ಮೆದುಳಿನ ಸೋಂಕು ಕಾಣಿಸಿಕೊಳ್ಳಲಿದೆ. ಹೀಗಾಗಿ ಯಾವುದೇ ಜ್ವರ ಕಾಣಿಸಿಕೊಂಡ್ರು ಕೂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
Kerala Nipah Virus Holiday announced for schools and colleges till September 24