ಮಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿರುವ ಹೊರ ರಾಜ್ಯ ಹಾಗೂ ಹೊರ ದೇಶಗಳ ವಿದ್ಯಾರ್ಥಿಗಳು ಈ ಬಾರಿ ತಮ್ಮ ತವರು ವಿವಿಗಳಲ್ಲಿಯೇ ಪರೀಕ್ಷೆಯನ್ನು ಬರೆಯಲು ಮಂಗಳೂರು ವಿವಿ ಅವಕಾಶ ಕಲ್ಪಿಸಿದೆ.

ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿರುವ 210 ಕಾಲೇಜುಗಳಲ್ಲಿ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ ಹಾಗೂ ಹೊರ ದೇಶಗಳ ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲೆ ತಾವು ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿಗೆ ಬಂದು ಪರೀಕ್ಷೆ ಬರೆಯುವುದು ದುಸ್ಥರವಾಗಿದೆ.

ಈ ಹಿನ್ನೆಲೆಯಲ್ಲಿ ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ವಿದ್ಯಾರ್ಥಿಗಳು ತರು ವಿವಿಗಳಲ್ಲಿಯೇ ಪರೀಕ್ಷೆಯನ್ನು ಬರೆಯಿಸುವ ಕುರಿತು ಮಂಗಳೂರು ವಿವಿ ಮಾತುಕತೆಯನ್ನು ನಡೆಸಿದ್ದು, ಇತರ ವಿವಿಗಳು ಕೂಡ ಬೆಂಬಲ ನೀಡಿವೆ ಎನ್ನಲಾಗುತ್ತಿದೆ.

ನೆರೆಯ ಕೇರಳ ರಾಜ್ಯದ ಸುಮಾರು 1000 ವಿದ್ಯಾರ್ಥಿಗಳು ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನು ಲಕ್ಷದ್ವೀಪ 7. ಮಣಿಪುರ 6, ಮಹಾರಾಷ್ಟ್ರ 4, ಜಮ್ಮುಕಾಶ್ಮೀರದ 2 ವಿದ್ಯಾರ್ಥಿಗಳು ಹಾಗೂ ಭೂತಾನ್ ನ 100 ವಿದ್ಯಾರ್ಥಿಗಳು ರಾಜ್ಯದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

ಈ ಪೈಕಿ ಕೇರಳ ಹೊರತು ಪಡಿಸಿ ಉಳಿದ ಕಡೆಗಳಲ್ಲಿನ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಈಗಾಗಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೇ ಪರೀಕ್ಷೆ ಹಾಜರಾಗಿ ಪರೀಕ್ಷೆ ಬರೆಯಲು ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಂಗಳೂರು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
.