ನಕಲಿ ಕೊರೊನಾ ಪರೀಕ್ಷಾ ವರದಿ : ವೈದ್ಯ ಹಾಗೂ ಆಪ್ತ ಸಹಾಯಕನ ಬಂಧನ

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ತೀವ್ರತೆ ಹರಡುತ್ತಿದ್ದಂತೆಯೇ ದೇಶದಲ್ಲಿ ನಕಲಿ ಕೋವಿಡ್ ಪರೀಕ್ಷೆಯ ಆರೋಪ ಕೇಳಿಬಂದಿತ್ತು. ಜನರ ಅನುಮಾನಕ್ಕೆ ಪುಷ್ಟಿ ನೀಡುವಂತೆ ನಕಲಿ ಕೊರೊನಾ ಪರೀಕ್ಷಾ ವರದಿಯನ್ನು ನೀಡುತ್ತಿದ್ದ ಆರೋಪದ ಮೇರೆಗೆ ವೈದ್ಯ ಹಾಗೂ ಆತನ ಆಪ್ತ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.

ನಕಲಿ ಕೊರೊನಾ ಪರೀಕ್ಷಾ ವರದಿ ನೀಡುತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿಯ . ಮಾಳ್ವವಿಯಾ ನಗರದ ನಿವಾಸಿ ಡಾ. ಕುಶ್ ಬಿಹಾರಿ ಪರಶರ್ ಹಾಗೂ ಆತನ ಸಹಾಯಕ ಅಮಿತ್ ಸಿಂಗ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಮಾನ್ಯತೆ ಪಡೆದ ಪರೀಕ್ಷಾ ಪ್ರಯೋಗಾಲಯ ದಾಖಲಿಸಿದ ದೂರಿನ ಆಧಾರದ ಹಿನ್ನೆಲೆಯಲ್ಲೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಉದ್ಯಮಿಯೋರ್ವರು ತನ್ನಿಬ್ಬರು ಉದ್ಯೋಗಿಗಳ ಕೊರೊನಾ ಪರೀಕ್ಷಾ ವರದಿ ನೀಡುವಂತೆ ವೈದ್ಯ ಪರಶರ್ ಬಳಿ ಕೇಳಿದ್ದಾರೆ. ಆದರೆ ವೈದ್ಯ ನಕಲಿ ವರದಿಯನ್ನು ಉದ್ಯಮಿಗೆ ಕಳುಹಿಸಿದ್ದಾರೆ. ಆದರೆ ಪರೀಕ್ಷಾ ವರದಿಯಲ್ಲಿ ಹೆಸರು ತಪ್ಪಾಗಿ ಮುದ್ರಿತವಾಗಿತ್ತು.

ಈ ಹಿನ್ನೆಲೆಯಲ್ಲಿ ವರದಿಯನ್ನು ಸರಿಪಡಿಸಿಕೊಡುವಂತೆ ಡಯಾಗ್ನೊಸ್ಟಿಕ್ ಸೆಂಟರ್ ಸಂಪರ್ಕಿಸಿದ್ದಾಗ ಅದು ನಕಲಿ ವರದಿ ಅನ್ನೋದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈಗಾಗಲೇ ಸುಮಾರು 75 ಮಂದಿಗೆ ನಕಲಿ ಕೊರೊನಾ ವರದಿಯನ್ನು ನೀಡಿದ್ದಾಗಿಯೂ ಒಪ್ಪಿಕೊಂಡಿದ್ದಾರೆ.

ಕಳೆದ ಎರಡೂವರೆ ತಿಂಗಳಿನಿಂದ ವೈದ್ಯ ಇದೇ ಕೃತ್ಯವನ್ನು ಎಸಗುತ್ತಿದ್ದ. ತನ್ನ ಬಳಿಗೆ ಬರುವ ರೋಗಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಿ 2,400 ರೂಪಾಯಿ ಪಡೆಯುತ್ತಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ನಕಲಿ ಕೊರೊನಾ ವರದಿ ನೀಡುವ ಜಾಲದ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಬಂಧಿತ ವೈದ್ಯ ಇತರ ಕಡೆಗಳಲ್ಲಿಯೂ ಇಂತಹದ್ದೇ ಕೃತ್ಯವೆಸಗಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

Leave A Reply

Your email address will not be published.