ಬೆಂಗಳೂರು : ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪದವಿ ಪೂರ್ವ ಕಾಲೇಜುಗಳ ಪ್ರಥಮ ಪಿಯುಸಿ ತರಗತಿಗಳಿಗೆ ಇಂದಿನಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಪ್ರಥಮ ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಕೊರೊನಾ ವೈರಸ್ ಸೋಂಕು ಹರಡುವಿಕೆ ಯನ್ನು ತಡೆಯುವ ನಿಟ್ಟಿನಲ್ಲಿ ಆನ್ ಲೈನ್ ಸೌಕರ್ಯವಿರುವ ಕಾಲೇಜುಗಳಲ್ಲಿ ಆನ್ಲೈನ್ ಮೂಲಕವೇ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಸೂಚನೆಯನ್ನು ನೀಡಲಾಗಿದೆ. ಆನ್ ಲೈನ್ ಪ್ರವೇಶಾವಕಾಶಕ್ಕೆ ಅವಕಾಶವಿಲ್ಲದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಖುದ್ದು ಹಾಜರಾಗಿ ಪ್ರವೇಶಾತಿ ನಡೆಸಬಹುದಾಗಿದೆ.
ಪಿಯುಸಿ ದಾಖಲಾತಿಯ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಒಂದೊಮ್ಮೆ ಕಾಲೇಜುಗಳು ಬಯಸಿದಲ್ಲಿ ಕಡಿಮೆ ಶುಲ್ಕವನ್ನು ಪಡೆಯಬಹುದಾಗಿದೆ, ಆದರೆ ಯಾವುದೇ ಕಾರಣಕ್ಕೂ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ತರಗತಿಗಳ ಆರಂಭ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲು ಸೂಚಿಸಿದೆ.




